ದೇವನಹಳ್ಳಿ ಅಂತಾರಾಷ್ಟ್ತ್ರೀಯ ವಿಮಾನ ನಿಲ್ದಾಣದಿಂದ ನಗರಕ್ಕೆ ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ಕೆಳಹಂತ ಸೇತುವೆ ಕಾಮಗಾರಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೈಗೆತ್ತಿಕೊಂಡಿದೆ.
ಕಾಮಗಾರಿ ಅಂದಾಕ್ಷಣ ನೆನಪು ಬರುವುದು ನಿಧಾನಗತಿಯ ಪ್ರಗತಿ. ಆದರೆ ಈ ಬಾರಿ ಪಾಲಿಕೆ ಎತ್ತಿಕೊಂಡಿರುವ ಕಾಮಗಾರಿ ಅವಧಿ ಕೇವಲ 72ತಾಸುಗಳು!
ನಗರದಲ್ಲಿ ಸಂಚಾರ ದಟ್ಟನೆ ತಗ್ಗಿಸುವ ಮತ್ತು ಸುಗಮ ಸಂಚಾರವನ್ನು ಕಲ್ಪಿಸುವುದಕ್ಕಾಗಿ ಈ ಮಹತ್ವದ ನಿರ್ಧಾರವನ್ನು ಕೈಗೆತ್ತಿಕೊಂಡಿರುವ ಪಾಲಿಕೆ ನಾಳೆಯಿಂದ ಕಾರ್ಯಾರಂಭ ಮಾಡಿ, ಈ ತಿಂಗಳ 19ರಂದು ಪೂರ್ಣಗೊಳಿಸಲಿದೆ ಎಂದು ಬೆಂಗಳೂರು ಮಹಾನಗರಪಾಲಿಕೆಯ ಆಯುಕ್ತ ಡಾ.ಎಸ್. ಸುಬ್ರಮಣ್ಯರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅತ್ಯಾಧುನಿಕ ಯಂತ್ರಗಳಿಂದ ಮಣ್ಣು ಅಗೆಯುವ ಕಾಮಗಾರಿ ನಡೆಯಲಿದ್ದು, 16ರ ಮಧ್ಯರಾತ್ರಿ ಪೂರ್ಣಗೊಳ್ಳಲಿದೆ. ಬಳಿಕ ಸಿಮೆಂಟ್ ಬ್ಲಾಕ್ಗಳ ಜೋಡಣೆ ತಂತ್ರಜ್ಞಾನದ ಅಂಡರ್ ಪಾಸ್ ನಿರ್ಮಿಸಲಾಗುವುದು. ಇದರಿಂದ ಕಾವೇರಿ ಜಂಕ್ಷನ್ನಲ್ಲಿ 3ದಿನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ನಂತರ ನಿರಾಳವಾಗಿ ಸಂಚರಿಸಬಹುದು. ಈ ಕಾಮಗಾರಿ ಮುಗಿದ ಬಳಿಕ ಹಲವು ಕಡೆಗಳಲ್ಲಿ ಇಂಥ ಅಂಡರ್ಪಾಸ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ಸಂಚರಿಸುವವರ ಸಂಖ್ಯೆ ಅಧಿಕವಾಗಿದ್ದು, ಇದರಿಂದ ಉಂಟಾಗುವ ವಾಹನ ದಟ್ಟಣಿ ಕಡಿಮೆ ಮಾಡಿ, ಸೂಕ್ತ ಸಮಯದಲ್ಲಿ ನಿಲ್ದಾಣ ಸೇರುವಂತೆ ಮಾಡುವುದೇ ಇದರ ಮುಖ್ಯ ಉದ್ದೇಶ. ಅಲ್ಲದೆ ದೇವನಹಳ್ಳಿ ವಿಮಾನ ನಿಲ್ದಾಣವು ಮಾರ್ಚ್ 28ರಂದು ಉದ್ಘಾಟನೆಗೊಳ್ಳಲಿದ್ದು, ಈ ವ್ಯವಸ್ಥೆಯಿಂದ ಸಂಚಾರಕ್ಕೆ ಅನುಕೂಲವಾಗಲಿದೆ.
|