ಜಿಲ್ಲಾಡಳಿತ ಆಟೋ ದರ ಹೆಚ್ಚಳ ಮಾಡಿ ಯಾವುದೇ ಆದೇಶ ಹೊರಡಿಸದಿದ್ದರೂ,ಕೆಲವೊಂದು ಕಡೆ ಆಟೋ ಚಾಲಕರು ಸ್ವತಃ ಹೆಚ್ಚಿನ ದರ ವಸೂಲಿ ಮಾಡಿರುವ ಪ್ರಕರಣಗಳು ವರದಿಯಾಗಿವೆ. ಆಟೋ ಪ್ರಯಾಣ ದರ ಹೆಚ್ಚಳದ ಕುರಿತು ಸಿಐಟಿಯು ಬೆಂಬಲಿತ ಆಟೋ ಚಾಲಕರ ಒಕ್ಕೂಟ ಈ ಹಿಂದೆ ಒಂದು ದಿನದ ಮುಷ್ಕರ ಹೂಡಿತ್ತು.
ಆಟೋದಲ್ಲಿ ಬಳಕೆಯಾಗುವ ಅನಿಲದ ದರ ಮತ್ತು ಇನ್ನಿತರ ಅಗತ್ಯ ವಸ್ತುಗಳ ಬೆಲೆ ಹೆಚ್ಚಾದ ಹಿನ್ನೆಲೆಯಲ್ಲಿ ಸಲ್ಲಿಸಲಾಗಿದ್ದ ದರ ಏರಿಕೆ ಬೇಡಿಕೆ ಇನ್ನೂ ಇತ್ಯರ್ಥವಾಗಬೇಕಿದ್ದರೂ ಕೆಲವು ಕಡೆ ಹೊಸ ಪ್ರಯಾಣ ದರಪಟ್ಟಿ ತೋರಿಸಿ ಅದರನ್ವಯ ಬಲವಂತವಾಗಿ ಹಣ ಪಡೆಯಲಾಗಿದೆ ಎಂಬ ಕೂಗುಗಳು ಕೇಳಿಬಂದಿವೆ.
ಜಿಲ್ಲಾಡಳಿತ ಅಥವಾ ಸಂಬಂಧಿಸಿದ ಇಲಾಖೆಯ ಮೊಹರನ್ನು ಹೊಂದಿರದ ಇಂಥ ದರಪಟ್ಟಿಯ ದೆಸೆಯಿಂದ ಕನಿಷ್ಟ ದರ 12 ರೂ.ನಿಂದ 15 ರೂ.ಗೆ ಜಿಗಿದಿರುವುದಕ್ಕೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲವು ಕಡೆಯಂತೂ ದರಪಟ್ಟಿಯ ಜೆರಾಕ್ಸ್ ಪ್ರತಿಯನ್ನು ಬಳಸಲಾಗುತ್ತಿದೆ.
ಈ ಕುರಿತು ಬಂದಿರುವ ದೂರುಗಳಿಗೆ ಸಂಬಂಧಿಸಿ ಅಂತಹ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಕೆ.ಸಿ.ರಾಮಮೂರ್ತಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಪ್ರಯಾಣಿಕರಿಂದ ಹೆಚ್ಚುವರಿ ದರ ವಸೂಲಿ ಮಾಡುತ್ತಿರುವುದರ ಕುರಿತು ಕೆಲ ಆಟೋ ಚಾಲಕರು ನೀಡುವ ಸಮಜಾಯಿಷಿಯೇ ಬೇರೆ. ಹೊಸ ವರ್ಷದ ಮೊದಲ ದಿನದಿಂದಲೂ ಪ್ರತಿ ಲೀಟರ್ ಗ್ಯಾಸ್‌ಗೆ ನೀಡುವ ರೂ.35.28ಗಳಿಗೆ ಆಯಿಲ್ ಬೆಲೆಯೂ ಸೇರಿದರೆ ಮೊತ್ತ ರೂ.42.50ನ್ನು ಮುಟ್ಟುತ್ತದೆ. ನಾವು ಹೆಚ್ಚುವರಿ ಹಣವನ್ನು ಪ್ರಯಾಣಿಕರಿಂದಲೇ ಪಡೆಯದೆ ಗತ್ಯಂತರವಿಲ್ಲ ಎಂಬುದು ಆಟೋ ಚಾಲಕರ ಅಭಿಮತ. ಒಟ್ಟಿನಲ್ಲಿ ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಬಡ ಬೋರೇಗೌಡ ಎಲ್ಲ ರೀತಿಯ ಬೆಲೆ ಏರಿಕೆಗಳಿಗೆ ಬಲಿಪಶುವಾಗಿದ್ದಾನೆ.
|