ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೇಜಾವರ ಶ್ರೀ ಉಪವಾಸ, ಪುತ್ತಿಗೆ ಶ್ರೀ ಅನ್ನತ್ಯಾಗ
NEWS ROOM
ಪರ್ಯಾಯ ವಿವಾದದ ಕುರಿತಾಗಿ ಪುತ್ತಿಗೆ ಹಾಗೂ ಪೇಜಾವರ ಮಠಾಧೀಶರುಗಳು ತಂತಮ್ಮ ಪಟ್ಟುಗಳನ್ನು ಸಡಿಲಿಸದಿರುವುದರಿಂದ, ವಿದ್ವಾಂಸರ ವಾಗ್ವೈಖರಿಗೆ ಹೆಸರಾಗಬೇಕಿದ್ದ ಉಡುಪಿಯೀಗ ಅಕ್ಷರಶಃ ಪಟ್ಟು - ಪ್ರತಿಪಟ್ಟುಗಳ ಗೂಡಾಗಿ ಮಾರ್ಪಟ್ಟಿದೆ.

ಶ್ರೀಕೃಷ್ಣ ಪೂಜೆಯ ಕುರಿತಾದ ತಮ್ಮ ಹಟವನ್ನು ಪುತ್ತಿಗೆ ಶ್ರೀಗಳು ಕೈಬಿಡಬೇಕೆಂದು ಪೇಜಾವರ ಶ್ರೀಗಳು ನಿನ್ನೆಯಿಂದಲೇ ಉಪವಾಸವನ್ನು ಆರಂಭಿಸಿದ್ದರೆ, ಅದಕ್ಕೆ ಪ್ರತಿಯಾಗಿ ಇಂದಿನಿಂದ ಪುತ್ತಿಗೆ ಶ್ರೀಗಳು ಅನ್ನತ್ಯಾಗದ ನಿರಶನವನ್ನು ಆರಂಭಿಸಿದ್ದಾರೆ. ವಿಶೇಷವೆಂದರೆ ಪೇಜಾವರರು ಅನ್ನವೂ ಸೇರಿದಂತೆ ಯಾವುದೇ ಸ್ವರೂಪದ ಆಹಾರವನ್ನು ಸೇವಿಸುತ್ತಿಲ್ಲ, ಅದರೆ ಪುತ್ತಿಗೆ ಶ್ರೀಗಳು ಅನ್ನಸತ್ಯಾಗ್ರಹವನ್ನು ಮಾತ್ರ ಆಚರಿಸುತ್ತಿದ್ದಾರೆ.

ಮಠಾಧೀಶದ್ವಯರ ನಡುವೆ ವಿವಾದದಿಂದಾಗಿ ಪರ್ಯಾಯ ಸಂಭ್ರಮಾಚರಣೆಗಳಲ್ಲಿ ಪಾಲ್ಗೊಳ್ಳಲು ಬಂದಿರುವ ಭಕ್ತಾದಿಗಳಲ್ಲಿ ತೀವ್ರ ನಿರಾಸೆಯನ್ನುಂಟುಮಾಡಿದೆ. ಏಕೆಂದರೆ ವಿವಾದ ಬಗೆಹರಿಯುವವರೆಗೂ, ಅಂದರೆ ಈ ತಿಂಗಳ 18ರ ವರೆಗೂ ಉಪವಾಸ ಮುಂದುವರಿಸುವುದಾಗಿ ಪೇಜಾವರರು ಪಟ್ಟುಹಿಡಿದಿರುವುದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ.

ಪುತ್ತಿಗೆ ಶ್ರೀಗಳು ಒಡ್ಡಿರುವ ಷರತ್ತುಗಳಲ್ಲಿ ಕೊನೆಯ ಷರತ್ತನ್ನು ಸಡಿಲಿಸಿದರೆ ಮಾತ್ರ ಉಪವಾಸ ಬಿಡುವೆ ಎಂಬುದು ಪೇಜಾವರರ ಸ್ಪಷ್ಟ ನುಡಿ. ಆದರೆ ಷರತ್ತು ಸಡಿಲಿಸುವ ಪ್ರಶ್ನೆಯೇ ಇಲ್ಲ ಎಂಬುದೂ ಪುತ್ತಿಗೆ ಶ್ರೀಗಳ ಸ್ಪಷ್ಟ ಉತ್ತರ. ಇದರೊಂದಿಗೆ ಆ ಲೌಕಿಕ ಷರತ್ತು ಯಾವುದು ಎಂಬುದನ್ನೂ ಹೊರ ಜಗತ್ತಿಗೆ ಬಹಿರಂಗ ಪಡಿಸಿಲ್ಲ. ಅದು ಈ ಎರಡೂ ಶ್ರೀಗಳ ನಡುವೆ ಮಾತ್ರ ಪ್ರಸ್ತಾಪವಾಗಿರುವುದರಿಂದ ಲೌಕಿಕ ಷರತ್ತಿನ ಕುರಿತು ವಿದ್ವಾಂಸರ ನಡುವೆ ಚರ್ಚೆಯಾಗುವ ಸಾಧ್ಯತೆಗಳಿಲ್ಲ. ಇದು ಪರ್ಯಾಯ ವಿವಾದ ಸುಸೂತ್ರವಾಗಿ ಬಗೆಹರಿಯುವುದಕ್ಕೆ ಸಂಬಂಧಿಸಿದ ಮತ್ತೊಂದು ಅಡ್ಡಗೋಡೆಯಾಗಿದೆ.

ಪರ್ಯಾಯ ಮಹೋತ್ಸವ ಸುಗಮವಾಗಿ ನಡೆಯುವುದೋ ಇಲ್ಲವೋ ಎಂಬುದೀಗ ಎರಡೂ ಮಠಗಳ ಭಕ್ತರ ಮನದಲ್ಲೀಗ ಉದ್ಭವವಾಗಿರುವ ಪ್ರಶ್ನೆ. ಇದಕ್ಕೂ ಮುನ್ನ ನಡೆದ ಹಲವು ಸ್ವರೂಪದ ಸಂಧಾನದ ಬೆಳವಣಿಗೆಗಳನ್ನು ಒಮ್ಮೆ ಅವಲೋಕಿಸಿದರೆ ಈ ಮಾತಿಗೆ ಪುಷ್ಟಿ ಸಿಗುತ್ತದೆ. ಪರ್ಯಾಯ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಹಲವು ಊರುಗಳಲ್ಲಿ ಪುತ್ತಿಗೆ ಶ್ರೀಗಳು ಯಾತ್ರೆ ಕೈಗೊಂಡಾಗಿನಿಂದ ಮೊದಲುಗೊಂಡು ಅವರು ಉಡುಪಿ ಪುರಪ್ರವೇಶ ಮಾಡುವವರೆಗೂ ಹಲವು ಸ್ವರೂಪದ ಪತ್ರಿಕಾ ಹೇಳಿಕೆಗಳು ಹಾಗೂ ವಿದ್ವತ್ಪೂರ್ಣ ಮಾತುಗಳ ಚಕಮಕಿ ಎರಡೂ ಮಠಕ್ಕೆ ಸೇರಿದ ವಿದ್ವಾಂಸರು ಹಾಗೂ ಅಭಿಮಾನೀ ಭಕ್ತಗಣದ ನಡುವೆ ನಡೆದುಕೊಂಡೇ ಬಂತು.

ಇದಾದ ನಂತರ ಮಠದ ಭಕ್ತರೊಬ್ಬರು ದಾವೆ ಹೂಡಿದಾಗ ಮಠದ ವಿವಾದ ನ್ಯಾಯಾಲಯದ ಮೆಟ್ಟಿಲೇರುವಂತಾಯ್ತು. ನ್ಯಾಯಾಲಯದ ಅಭಿಪ್ರಾಯ ಹೊರಬಿದ್ದ ನಂತರವೂ ವಿವಾದ ತಣ್ಣಗಾಗುವ ಬದಲು ಸಮಸ್ಯೆ ಬೆಳೆಯುತ್ತಲೇ ಹೋಯ್ತು. ಉತ್ತರಾದಿ ಮಠದ ಸ್ವಾಮಿಗಳ ನೇತೃತ್ವದಲ್ಲಿ ನಡೆದ ವಿದ್ವಾಂಸರ ಸಭೆಯಲ್ಲಿಯೂ ಸಹ ಪುತ್ತಿಗೆ ಮಠಾಧೀಶರು ಜಗ್ಗದ ಕಾರಣ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಉತ್ತರಾದಿ ಮಠದ ಸ್ವಾಮಿಗಳ ಮಾತು ಒಪ್ಪದ್ದರಿಂದ ಅವರಿಗೂ ಮುಖಭಂಗವಾದಂತಾಯ್ತು ಎಂಬ ಅಭಿಪ್ರಾಯಗಳೂ ಕೇಳಿಬಂದವು. ಈ ಹಿನ್ನೆಲೆಯಲ್ಲಿ ಪೇಜಾವರರು ಕಂಡುಕೊಂಡ ಕೊನೆಯ ಅಸ್ತ್ತ್ರವೇ ಉಪವಾಸ ಆಚರಣೆ.

ಪರ್ಯಾಯಕ್ಕೆ ಸಂಬಂಧಪಟ್ಟ ಕೆಲವೊಂದು ಸಿದ್ಧತೆಗಳು ವರ್ಷದಿಂದಲೇ ಪ್ರಾರಂಭವಾಗುತ್ತದೆಯಾದ್ದರಿಂದ ಅಂದಂದಿನ ಸಮಸ್ಯೆಗಳನ್ನು ಅಂದಂದೇ ಪೂರೈಸಿಕೊಳ್ಳದೇ ಪರ್ಯಾಯಕ್ಕೆ ಇನ್ನು ಕೇವಲ ಎರಡು ದಿನವಿರುವಾಗ ಸಮಸ್ಯೆ ಜಟಿಲವಾಗುತ್ತಿರುವುದಕ್ಕೆ ಉಡುಪಿಯಲ್ಲಿ ಸೇರಿರುವ ಭಕ್ತಗಣ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದೆ. ಎರಡು ದಿನಗಳಲ್ಲಿ ಸಮಸ್ಯೆ ಇತ್ಯರ್ಥವಾಗಲಿದೆ ಎಂಬ ಪುತ್ತಿಗೆ ಶ್ರೀಗಳ ಅಭಿಪ್ರಾಯ-ಆಶಯಗಳು ನಿಜವಾಗಲಿ ಎಂಬುದೇ ಭಕ್ತಗಣದ ಸದ್ಯದ ಆಶಯ.
ಮತ್ತಷ್ಟು
ಆಟೊ ಚಾಲಕರಿಂದ ಹೆಚ್ಚಿನ ದರ ವಸೂಲಿ
ಕೃಷ್ಣಮಠ ಪರ್ಯಾಯಕ್ಕೆ ಸಜ್ಜುಗೊಂಡ ಉಡುಪಿ
ಮೈತ್ರಿ ಇಲ್ಲದೆಯೇ ಜೆಡಿಎಸ್ ಅಧಿಕಾರಕ್ಕೆ: ಕುಮಾರ
ಪರ್ಯಾಯ: ಪೇಜಾವರಶ್ರೀ ಉಪವಾಸ ಸತ್ಯಾಗ್ರಹ
ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಕರೆ
ಪರ್ಯಾಯ ವಿವಾದ: ಮಳೆ ನಿಂತರೂ ತೊಟ್ಟಿಕ್ಕುತ್ತಿರುವ ನೀರು