ಜೆಡಿಎಸ್ ತೊರೆದ ನಂತರ ಸೂಕ್ತ ಸ್ಥಾನಮಾನ ಸಿಗದೆ ಅಸಮಾಧಾನಗೊಂಡಿದ್ದ ಸಿದ್ಧರಾಮಯ್ಯನವರಿಗೆ ಕಾಂಗ್ರೆಸ್ ಕೊನೆಗೂ ಅವಕಾಶ ಕಲ್ಪಿಸಲಿದೆ. ಅವರಿಗೆ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದ್ದು ಅಧಿಕೃತವಾಗಿ ಘೋಷಣೆಯಾಗುವುದು ಬಾಕಿ ಇದೆ.
ಹೈಕಮಾಂಡಿನಿಂದ ಬಂದಿದ್ದ ಬುಲಾವ್ ಅನುಸಾರ ದೆಹಲಿಗೆ ತೆರಳಿದ್ದ ಸಿದ್ಧರಾಮಯ್ಯ ಪಕ್ಷದ ವರಿಷ್ಠರೊಂದಿಗೆ ನಡೆಸಿದ ಚರ್ಚೆಯ ಫಲಶೃತಿಯಾಗಿ ಈ ತೀರ್ಮಾನ ತಳೆಯಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಪಕ್ಷದ ಪುನಾರಚನೆಗೆ ಸಂಬಂಧಿಸಿದಂತೆ ಚರ್ಚಿಸಲು ದೆಹಲಿಗೆ ಬರುವಂತೆ ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಹಾಗೂ ಸಿದ್ಧರಾಮಯ್ಯನವರಿಗೆ ಸೂಚನೆ ನೀಡಲಾಗಿತ್ತು. ಆದರೆ ಕಾಲು ನೋವಿನ ಕಾರಣ ಧರಂಸಿಂಗ್‌ರವರು ತೆರಳಿರಲಿಲ್ಲ.
ಸಿದ್ಧರಾಮಯ್ಯನವರ ಜೊತೆ ಗುರುತಿಸಿಕೊಂಡಿದ್ದ ಜೆಡಿಎಸ್‌ನ 8 ಮಂದಿ ಮಾಜಿ ಶಾಸಕರು ಕಾಂಗ್ರೆಸ್‌ಗೆ ಸೇರಲು ಅನುವಾಗುವಂತೆ ಕಾಂಗ್ರೆಸ್ ಮುಖಂಡರೊಡನೆ ಸಿದ್ಧರಾಮಯ್ಯನವರು ಚರ್ಚಿಸಬೇಕಿದ್ದು, ಸದ್ಯದಲ್ಲಿಯೇ ಚುನಾವಣೆಗಳು ಘೋಷಣೆಯಾಗಲಿರುವ ಹಿನ್ನೆಲೆಯಲ್ಲಿ ಈ ಸೇರ್ಪಡೆ ಅತಿ ಶೀಘ್ರದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
|