ಇನ್ನೇನು ಬಗೆಹರಿಯಿತು ಎಂಬಂತೆ ಬಿಂಬಿಸಲಾಗಿದ್ದ ಉಡುಪಿ ಶ್ರೀಕೃಷ್ಣ ಪೂಜೆಯ ಕುರಿತ ವಿವಾದವು ಪರ್ಯಾಯೋತ್ಸವದ ವಿಧಿಗಳಿಗೆ ಚಾಲನೆ ನೀಡುವ ದಿನವಾದ ಗುರುವಾರವೂ ಕಗ್ಗಂಟಾಗಿಯೇ ಉಳಿದಿದೆ. ಸಂಧಾನ ವಿಫಲವಾಗಿದ್ದು, ಪೇಜಾವರ ಶ್ರೀಗಳು ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ ಎಂದು ಅವರು ಬೆಂಬಲಿಗರು ತಿಳಿಸಿದ್ದಾರೆ.
ಬುಧವಾರ ರಾತ್ರಿ, ರಾಘವೇಂದ್ರ ಮಠದ ಸುಯಮೀಂದ್ರ ತೀರ್ಥರ ಮಧ್ಯಸ್ಥಿಕೆಯಲ್ಲಿ ಪರ್ಯಾಯ ವಿವಾದ ಇತ್ಯರ್ಥವಾಯಿತು, ಪರ್ಯಾಯೋತ್ಸವ ಕುರಿತ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ, ಪುತ್ತಿಗೆ ಮಠಾಧೀಶರ ಪರವಾಗಿಯೇ ತೀರ್ಮಾನ ಹೊರಬಿದ್ದಿದೆ ಎಂದೆಲ್ಲಾ ಸುದ್ದಿಗಾರರ ಮುಂದೆ ಬಿಂಬಿಸಲಾಗಿತ್ತು. ಪುತ್ತಿಗೆ ಶ್ರೀಗಳು ಹಾಗೂ ಪೇಜಾವರ ಶ್ರೀಗಳ ನಡುವಣ ನಿನ್ನೆ ರಾತ್ರಿ ನಡೆದ ಸಂಧಾನ ಸಫಲವಾಗಿದೆ. ವಿವಾದ ಸುಸೂತ್ರವಾಗಿ ಬಗೆಹರಿದಿದೆ ಎಂದೇ ಮಾಧ್ಯಮದ ಮುಂದೆ ಬಿಂಬಿಸಲಾಗಿತ್ತು. ಆದರೂ ಪೇಜಾವರ ಮಠದ ಪ್ರತಿನಿಧಿ ಹಾಗೂ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯರಾದ ಹರಿದಾಸ ಭಟ್ ಅವರು ಪರ್ಯಾಯ ವಿವಾದ ಯಥಾಸ್ಥಿತಿ ಮುಂದುವರಿದಿದೆ ಎಂಬರ್ಥದ ಸೂಚನೆಗಳನ್ನು ನೀಡಿದ್ದರು. ಈಗ ಅವರ ಹೇಳಿಕೆ ನಿಜವಾದಂತಾಗಿದೆ.
ಈಗಾಗಲೇ ನಿರ್ಧರಿಸಲಾಗಿರುವ ಕಾರ್ಯಕ್ರಮದ ಅನುಸೂಚಿಯ ಪ್ರಕಾರ, ಪರ್ಯಾಯಕ್ಕೆ ಸಂಬಂಧಿಸಿ ಗುರುವಾರ ರಾತ್ರಿಯಿಂದಲೇ ಆಚರಣೆಗಳು ಪ್ರಾರಂಭವಾಗಬೇಕು. ಆದರೆ ಇದಕ್ಕೆ ತೊಡಕಾಗಿರುವುದು ಪೇಜಾವರ ಶ್ರೀಗಳ ಮುಂದುವರಿದ ಉಪವಾಸ. ಸಂಧಾನ ವಿಫಲವಾಗಿದೆ ಹಾಗಾಗಿ ಪೇಜಾವರರೂ ತಮ್ಮ ಸಂಕಲ್ಪದಂತೆ ಉಪವಾಸವನ್ನು ಮುಂದುವರಿಸಿದ್ದಾರೆ ಎಂದು ಅವರ ಬೆಂಬಲಿಗರು ಹೇಳಿದ್ದಾರೆ.
ಹೆಚ್ಚಿನ ಭದ್ರತೆ: ಸನ್ನಿವೇಶದ ಗಂಭೀರತೆಯನ್ನು ಅರಿತೋ ಏನೋ ಈ ಬಾರಿಯ ಪರ್ಯಾಯದ ಸಂದರ್ಭದಲ್ಲಿ ಇದೇ ಪ್ರಥಮ ಬಾರಿಗೆ ಉಡುಪಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದು ಕೇವಲ ಉಡುಪಿಯ ಪರ್ಯಾಯವಲ್ಲ, 'ವಿಶ್ವ ಪರ್ಯಾಯ' ಎಂದು ಪುತ್ತಿಗೆ ಶ್ರೀಗಳು ಘೋಷಿಸಿರುವಂತೆಯೇ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶೀಯರೂ ಉಡುಪಿಯಲ್ಲಿ ಜಮಾವಣೆಗೊಂಡಿದ್ದಾರೆ.
ಮಠಾಧೀಶರು ಪರಸ್ಪರ ಚರ್ಚಿಸಿರುವ ರಾಜೀ ಸೂತ್ರಗಳಲ್ಲಿ ಸಾರ್ವಜನಿಕರ ಮುಂದೆ ಬಹಿರಂಗಪಡಿಸಲಾಗದ ಲೌಕಿಕ ಷರತ್ತೊಂದು ಎದುರಾಗಿತ್ತು. ಅದೇ ಸಂಧಾನ ವಿಫಲವಾಗಲು ಮೂಲಕಾರಣ ಎಂಬುದೀಗ ಭಕ್ತಾದಿಗಳ ಅನುಮಾನ.
|