ಪಾದಚಾರಿಯೊಬ್ಬರು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಧಾವಿಸಿಬಂದ ಕ್ಯಾಂಟರ್ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟ ಘಟನೆ ವರದಿಯಾಗಿದೆ.
ಕಮಲಾನಗರದ ಪೈಪ್ ಲೈ ನ್ ಸಮೀಪದ ರಿಂಗ್‌ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು ಬಿಎಸ್ಎನ್ಎಲ್ ಉದ್ಯೋಗಿಯಾದ ತಿಮ್ಮಯ್ಯ ಎಂಬುವವರು ಕೆಲಸಕ್ಕೆ ಹೊರಟಿದ್ದಾಗ, ಸಿಗರೇಟ್ ತೆಗೆದುಕೊಂಡು ರಸ್ತೆ ದಾಟುವ ಸಂದರ್ಭದಲ್ಲಿ ಕ್ಯಾಂಟರ್ ಡಿಕ್ಕಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದ ರೊಚ್ಚಿಗೆದ್ದ ಜನರು ಸದರಿ ಕ್ಯಾಂಟರ್ ವಾಹನಕ್ಕೆ ಬೆಂಕಿ ಹಚ್ಚಿದರಲ್ಲದೆ, 6 ಬಿಎಂಟಿಸಿ ಬಸ್ಸುಗಳಿಗೆ ಕಲ್ಲು ತೂರಿ ಜಖಂಗೊಳಿಸಿದ್ದಾರೆ. ಇದನ್ನು ತಡೆಯಲು ಸ್ಥಳಕ್ಕೆ ಧಾವಿಸಿದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದ್ದು ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ತರಾತುರಿಯಲ್ಲಿ ಶವವನ್ನು ಅಲ್ಲಿಂದ ಸಾಗಿಸಿದರು ಎಂಬುದು ಜನರ ಆಕ್ರೋಶಕ್ಕೆ ಕಾರಣ. ಆದರೆ ಪೊಲೀಸರ ಹೇಳಿಕೆ ಬೇರೆಯದೇ ರೀತಿಯಲ್ಲಿದೆ. ವಾಹನ ಬಡಿದು ತಿಮ್ಮಯ್ಯ ಕೆಳಗೆ ಬಿದ್ದಾಗ ಅವರಿನ್ನೂ ಬದುಕಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸುವಲ್ಲಿನ ವಿಳಂಬದಿಂದಾಗಿ ಮೃತಪಟ್ಟರು ಎಂಬುದು ಅವರ ವಿವರಣೆ.
ರಿಂಗ್ ರಸ್ತೆ ಆದಾಗಿನಿಂದ ಇಲ್ಲಿ ಅಪಘಾತ ಸಾಮಾನ್ಯವಾಗಿದೆ. ಈ ಕುರಿತು ಎಷ್ಟು ಮನವಿಗಳನ್ನು ನೀಡಿದರೂ ಪ್ರಯೋಜನವಾಗಿಲ್ಲ. ಒಂದು ವಾರದ ಅವಧಿಯಲ್ಲಿ ಈಗ ಆಗುತ್ತಿರುವುದು ಎರಡನೇ ಅಪಘಾತ ಎಂದು ಆರೋಪಿಸಿರುವ ಇಲ್ಲಿನ ಸಾರ್ವಜನಿಕರು ಇಲ್ಲಿ ಅಂಡರ್‌ಪಾಸ್ ನಿರ್ಮಾಣವಾಗಬೇಕು, ಜೊತೆಗೆ ಸಾರ್ವಜನಿಕರ ಸಂಚಾರಕ್ಕಾಗಿ ಮೇಲ್ಸೇತುವೆ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈಗ ಮೃತರ ಶವವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು, ಪೊಲೀಸರು ವಾತಾವರಣವನ್ನು ತಿಳಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
|