ಜೆಡಿಎಸ್‌ನಿಂದ ಬಂಡಾಯವೆದ್ದಿರುವ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ತಮ್ಮ ಬೆಂಬಲಿಗರೊಂದಿಗೆ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಇಂದು ಸಭೆ ಸೇರಿ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.
ಈಗಾಗಲೇ ಹಲವು ಪಕ್ಷಗಳ ಮುಖಂಡರೊಂದಿಗೆ ಪ್ರಕಾಶ್ ಮಾತುಕತೆ ನಡೆಸಿದ್ದಾರೆ. ಇತ್ತೀಚಿಗೆ ನಡೆದ ಬಿಜೆಪಿ ನಾಯಕರೊಂದಿಗಿನ ಮಾತುಕತೆ ಫಲಪ್ರದವಾಗಿದ್ದು, ಪ್ರಕಾಶ್ ಬಿಜೆಪಿಯತ್ತ ಮುಖ ಮಾಡಿರುವುದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಅವರ ಬಣದಲ್ಲಿ ಭಿನ್ನಾಭಿಪ್ರಾಯ ಎದ್ದಿರುವುದು ಸ್ವಲ್ಪ ಮಟ್ಟಿನ ಗೊಂದಲಮಯ ವಾತಾವರಣಕ್ಕೆ ಎಡೆ ಮಾಡಿಕೊಟ್ಟಿದೆ.
ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿಯವರು ಬಿಜೆಪಿ ಸೇರುವ ಬಗ್ಗೆ ಅಸಮಾಧಾನ ಪ್ರಕಟಿಸಿದ್ದು, ಕಾಂಗ್ರೆಸ್ ಪಕ್ಷದ ಕಡೆಗೆ ಒಲವು ತೋರಿಸಿದ್ದಾರೆ. ಈ ಹಾದಿಯನ್ನು ಅನುಸರಿಸಲು ಸಂತೋಷ್ ಲಾಡ್ ಹಾಗೂ ಬಿ.ಸಿ. ಪಾಟೀಲ್ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಪ್ರಕಾಶ್ ಸಂಕ್ರಾತಿ ಬಳಿಕ ಅಂತಿಮ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದ್ದರು. ಇಂದು ನಿರ್ಧಾರಕ್ಕೆ ವೇದಿಕೆ ಸಿದ್ದವಾಗಿದೆ.
ಬಣದ ನಾಯಕರ ನಿರ್ಧಾರವೇನೇ ಇದ್ದರೂ, ಪ್ರಸ್ತುತ ಪ್ರಕಾಶ್ ನಿರ್ಧಾರವೇ ಮುಖ್ಯ. ಲಿಂಗಾಯಿತ ಸಮಾಜವನ್ನು ತಮ್ಮ ಕಡೆ ಸೆಳೆಯುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಪ್ರಕಾಶ್‌ರನ್ನು ಒಲೈಸಲು ಮನಸ್ಸು ಮಾಡಿರುವುದಂತೂ ಸತ್ಯ. ಪ್ರಕಾಶ್ ಬಿಜೆಪಿ ಜತೆ ಮಾತುಕತೆ ನಡೆಸಿದ್ದರೂ, ಎಲ್ಲರಿಗೂ ಟಿಕೆಟ್ ನೀಡುವ ಬಗ್ಗೆ ಬಿಜೆಪಿ ಆಸಕ್ತಿ ವಹಿಸಿಲ್ಲ. ಈ ಎಲ್ಲಾ ವಿವರಗಳನ್ನು ಸಭೆಯಲ್ಲಿ ಚರ್ಚಿಸಿ ಪ್ರಕಾಶ್ ಅಂತಿಮ ನಿರ್ಧಾರವನ್ನು ತಿಳಿಸಲಿದ್ದಾರೆ.
ಆದರೆ ಈ ಮಧ್ಯೆ ಪ್ರಕಾಶ್‌ರನ್ನು ಜೆಡಿಎಸ್‌ನಲ್ಲಿಯೇ ಉಳಿಸಿಕೊಳ್ಳಲು ಮತ್ತೊಂದು ಸುತ್ತಿನ ಪ್ರಯತ್ನ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿದ್ದಾರೆ. ಏ ಅವರನ್ನೆಲ್ಲಾ ಆಚೆಗೆ ಬಿಸಾಕ್ರೀ, ಪಕ್ಷಕ್ಕೆ ಯಾರು ಬೇಕಾದ್ರೂ ಬರಬಹುದು, ಯಾರು ಬೇಕಾದರೂ ಹೋಗಬಹುದು ಎಂದು ಪಕ್ಷದ ವರಿಷ್ಠ ದೇವೇಗೌಡರು ಗುಡುಗಿದ್ದರೂ, ಕುಮಾರಸ್ವಾಮಿಯವರು ಪ್ರಕಾಶ್‌ರೆಡೆಗೆ ಇನ್ನೂ ಮೃದು ಧೋರಣೆ ಇಟ್ಟುಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕುಮಾರಣ್ಣನ ಒತ್ತಾಯಕ್ಕೆ ಪ್ರಕಾಶ್ ಮಣಿಯುವರೇ, ಅಥವಾ ಬೆಂಬಲಿಗರ ಒತ್ತಾಯಕ್ಕೆ ಮಣಿದು ಕಾಂಗ್ರೆಸ್ ಬಾಗಿಲು ತಟ್ಟುವರೇ ಅಥವಾ ಮಾತುಕತೆಯನುಸಾರ ಬಿಜೆಪಿ ಸೇರುವರೇ ಎಂಬುದು ಅವರನ್ನು ನಾಯಕರನ್ನಾಗಿ ಬಿಂಬಿಸಿರುವ ಲಿಂಗಾಯಿತ ಸಮುದಾಯವೂ ಸೇರಿದಂತೆ ಇತರ ಸಮುದಾಯದವರ ಕುತೂಹಲ.
|