ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಸರ್ವಜ್ಞ ಪೀಠಾರೋಹಣ ಮತ್ತು ಶ್ರೀಕೃಷ್ಣ ಪೂಜೆ ಮಾಡುವ ಅರ್ಹತೆಯ ಕುರಿತ ಬಿಕ್ಕಟ್ಟು ಇನ್ನೂ ಬಗೆ ಹರಿದಿಲ್ಲ.
ಬುಧವಾರ ರಾತ್ರಿ ಶ್ರೀರಾಘವೇಂದ್ರ ಮಠದಲ್ಲಿ ನಡೆದ ಸಂಧಾನ ಮಾತುಕತೆಯ ಬಳಿಕ ಮಾತನಾಡಿದ ಪುತ್ತಿಗೆ ಶ್ರೀಗಳು, ತಮ್ಮ ಮತ್ತು ಪೇಜಾವರ ಶ್ರೀ ವಿಶ್ವೇಶತೀರ್ಥರ ನಡುವೆ ಮಂತ್ರಾಲಯ ರಾಘವೇಂದ್ರ ಮಠದ ಸುಯಮೀಂದ್ರ ಆಚಾರ್ಯರ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯು 'ಸಮಾಧಾನಕರ'ವಾಗಿತ್ತು ಎಂದು ಹೇಳಿದರಲ್ಲದೆ, ನಾಳೆ ತಾನು ಪರ್ಯಾಯ ಪೀಠವೇರುವುದಾಗಿಯೂ ಅಷ್ಟ ಮಠಾಧೀಶರೊಂದಿಗೆ ಪೂಜೆ ನಡೆಸುವುದಾಗಿಯೂ ತಿಳಿಸಿದರು.
ಈ ಕುರಿತ ಒಪ್ಪಂದಕ್ಕೆ ಅಷ್ಟಮಠಗಳ ಇಬ್ಬರು ಯತಿಗಳು ಸಮ್ಮತಿ ಸೂಚಿಸಲು ಲಭ್ಯವಿರದ ಕಾರಣ ಅಧಿಕೃತ ಘೋಷಣೆ ಇಂದು ಮಾಡಲಾಗುತ್ತದೆ.
ನಾಳೆ ನಡೆಯುವ ಪರ್ಯಾಯ ಮೆರವಣಿಗೆಯಲ್ಲಿ ಎಲ್ಲಾ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದು ಮಾತುಕತೆ ವೇಳೆ ಹಾಜರಿದ್ದ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಇದೇ ವೇಳೆ, ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದ ಹೊಸ ಕರಾರನ್ನು ಪುತ್ತಿಗೆ ಶ್ರೀಗಳು ಮುಂದಿಟ್ಟ ಕಾರಣ, ಸಂಧಾನದಲ್ಲೇನೂ ಪ್ರಗತಿ ಕಾಣಲಿಲ್ಲ ಎಂದು ಪೇಜಾವರ ಮಠದ ಮೂಲಗಳು ತಿಳಿಸಿವೆ. ಹೊಸ ಷರತ್ತಿಗೆ ಕೆಲವು ಸ್ವಾಮೀಜಿಗಳು ತೀವ್ರ ಆಕ್ಷೇಪವೆತ್ತಿದರು ಎಂದು ಹೇಳಲಾಗಿದೆ.
ವಿವಾದ ಈಗಲೂ ಹಾಗೆಯೇ ಇದೆ. ಮಾತುಕತೆಯಲ್ಲಿ ಯಾವುದೇ ಪ್ರಗತಿ ಆಗಿಲ್ಲ ಎಂದು ಪೇಜಾವರ ಮಠದ ವಕ್ತಾರ ಹರಿದಾಸ ಭಟ್ ತಿಳಿಸಿದ್ದಾರೆ. ಇಂದು ಸಂಜೆಯೊಳಗೆ ವಿವಾದ ಪರಿಹಾರವಾಗಬಹುದು ಎಂಬ ನಂಬಿಕೆ ಭಜಕರದು.
|