ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪರ್ಯಾಯ ಸಂಪ್ರದಾಯದ ಸಾಗರೋಲ್ಲಂಘನೆ!
ನಿರ್ಗಮನ ಪರ್ಯಾಯ ಶ್ರೀಗಳಿಂದ ಸ್ವಾಗತವಿಲ್ಲ, ಕೀಲಿಕೈ ಹಸ್ತಾಂತರವಿಲ್ಲ, ಅಷ್ಟ ಮಠಾಧೀಶರಿಗೆ ಪಾದಪೂಜೆಯೂ ಇಲ್ಲ
ಧಾರ್ಮಿಕತೆಗೆ, ಆಚರಣೆಗಳಿಗೆ, ಭಕ್ತಿಗೆ, ಸಂಭ್ರಮಕ್ಕೆ ದ್ಯೋತಕವಾಗಿ ನಿಂತು ಇತಿಹಾಸದ ಪುಟಗಳಲ್ಲಿ ದಾಖಲಾಗಬೇಕಿದ್ದ ಪುತ್ತಿಗೆ ಪರ್ಯಾಯ ಮಹೋತ್ಸವ, ಸಂಪ್ರದಾಯ ಹರಣದ ಕಪ್ಪು ಚುಕ್ಕಿಯನ್ನು ಹೆಗಲಿಗೇರಿಸಿಕೊಂಡೇ ವಿಕ್ಷಿಪ್ತತೆಯನ್ನು ಮೆರೆಯಬೇಕಾಗಿ ಬಂತು. ಇದರಿಂದಾಗಿ 750 ವರ್ಷಗಳ ಇತಿಹಾಸ ಹೊಂದಿರುವ ಮಠದ ಅಧ್ಯಾಯದಲ್ಲಿ ಬೇರೆಯದೇ ಆದ ಪಠ್ಯವನ್ನು ಸೇರಿಸಿದಂತಾಗಿದೆ.

ಇದು ನಡೆದಿರುವುದು ಒಂದೆರಡು ಬಾರಿಯಲ್ಲ. ಪುತ್ತಿಗೆ ಶ್ರೀಗಳು ಪರ್ಯಾಯಕ್ಕೆ ಪೂರ್ವಭಾವಿಯಾಗಿ ಎಲ್ಲೆಡೆ ಸಂಚಾರ ಪೂರೈಸಿಕೊಂಡು ಉಡುಪಿ ಪುರ ಪ್ರವೇಶ ಮಾಡುವಲ್ಲಿಂದಲೂ ಸಹ ಹಲವು ಹನ್ನೊಂದು ಆಚರಣೆಗಳಿಗೆ ಕತ್ತರಿ ಬಿದ್ದಿದೆ.

ಪುತ್ತಿಗೆ ಶ್ರೀಗಳು ಉಡುಪಿ ಪುರ ಪ್ರವೇಶ ಮಾಡುವ ಸಂದರ್ಭದಲ್ಲಿ ಅವರನ್ನು ಹಿಂದಿನ ಪರ್ಯಾಯ ಪೀಠಾಧೀಶರಾದ ಕೃಷ್ಣಾಪುರ ಮಠಾಧೀಶರು ಸ್ವಾಗತಿಸಬೇಕಿತ್ತು. ಆದರೆ ಇದು ನಡೆಯಲಿಲ್ಲ. ಇದಷ್ಟೇ ಅಲ್ಲದೇ, ಪುತ್ತಿಗೆ ಶ್ರೀಗಳು ಸರ್ವಜ್ಞ ಪೀಠವೇರುವುದಕ್ಕೆ ಮುಂಚಿತವಾಗಿ ಸದರಿ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥರಿಗೆ ಸನ್ಮಾನ ನಡೆಯಬೇಕಿತ್ತು. ಆದರೆ ವಿವಾದದ ಹೊಗೆಯಲ್ಲಿ ಅದೂ ನಡೆಯಲಿಲ್ಲ.

ಭಾವೀ ಪರ್ಯಾಯ ಪೀಠಾಧಿಪತಿಗಳು ಸರ್ವಜ್ಞ ಪೀಠವನ್ನೇರುವ ಮುನ್ನ ಉಳಿದ ಏಳೂ ಮಠಾಧೀಶರನ್ನು ಆದರಿಸಿ, ಅವರ ಪಾದ ಪೂಜೆಯನ್ನು ನಡೆಸಬೇಕಾದದ್ದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಒಂದು ಸತ್ ಸಂಪ್ರದಾಯ ಹಾಗೂ ಆಚರಣೆ. ಇಂಥ ಸಂಪ್ರದಾಯಕ್ಕೂ ಭಂಗ ಬಂದಿದ್ದು ಈ ಬಾರಿಯ ಪರ್ಯಾಯದಲ್ಲೇ. ಪೇಜಾವರರು ಉಪವಾಸ ಆಚರಿಸುತ್ತಿದ್ದ ಸಂದರ್ಭದಲ್ಲಿ ಅವರೊಂದಿಗೆ ಸಮಾಲೋಚಿಸಲು ಹೋದ ಪುತ್ತಿಗೆ ಶ್ರೀಗಳು ಅವರಿಗೆ ಪಾದಾಭಿವಂದನೆ ಮಾಡಿ ಆಶೀರ್ವಾದ ಪಡೆದರೇ ವಿನಃ ಸಂಪ್ರದಾಯ ಪೂರ್ವಕವಾಗಿ ಪಾದಪೂಜೆ ಮಾಡಲಿಲ್ಲ ಎಂಬುದಿಲ್ಲಿ ಗಮನಾರ್ಹ.

ಇದೆಲ್ಲಕ್ಕಿಂತ ಮಿಗಿಲಾದದ್ದೆಂದರೆ, ಪರ್ಯಾಯ ಪೀಠವೇರುವ ಮಠಾಧಿಪತಿಗಳು ಜೋಡುಕಟ್ಟೆಯಿಂದ ಉಡುಪಿಯವರೆಗೆ ಮೆರವಣಿಗೆಯಲ್ಲಿ ಬರುವಾಗ ಉಳಿದ ಏಳು ಮಠಾಧಿಪತಿಗಳೂ ಇದರಲ್ಲಿ ಪಾಲ್ಗೊಳ್ಳಬೇಕು ಹಾಗೂ ದರ್ಬಾರ್ ಉತ್ಸವದಲ್ಲಿಯೂ ಆಸೀನರಾಗಿರಬೇಕು. ಇದಂತೂ ಈ ಬಾರಿ ಕಂಡು ಬರಲೇ ಇಲ್ಲ. ಬದಲಾಗಿ ಭೀಮನಕಟ್ಟೆಯ ಸ್ವಾಮೀಜಿಯವರು ದರ್ಬಾರಿನಲ್ಲಿ ಉಪಸ್ಥಿತರಿದ್ದರು. ಈ ಗೈರುಹಾಜರಿ ಎಷ್ಟರಮಟ್ಟಿಗೆ ಎದ್ದು ಕಾಣುತ್ತಿತ್ತೆಂದರೆ, ನಿನ್ನೆಯವರೆಗೆ ಪುತ್ತಿಗೆ ಶ್ರೀಗಳ ನೆರಳಿನಂತೇ ಇದ್ದ ಶಿರೂರು ಮಠದ ಸ್ವಾಮೀಜಿಯವರೂ ಇಂದು ಬೆಳಗಿನ ಆಚರಣೆಗಳ ಸಂದರ್ಭದಲ್ಲಿ ನಾಪತ್ತೆಯಾಗಿದ್ದರು. ಇವರಾದರೂ ಕೊನೇವರೆಗೆ ಪುತ್ತಿಗೆ ಶ್ರೀಗಳ ಜೊತೆಯಲ್ಲಿದ್ದು ಬೆಂಬಲ ಕೊಡುತ್ತಾರೆ ಎಂದು ಭಕ್ತಾದಿಗಳು ನಂಬಿದ್ದರು.

ದರ್ಬಾರ್ ಸಂದರ್ಭದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ನಟ-ರಾಜಕಾರಣಿ ಶ್ರೀನಾಥ್, ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್, ಕೇಂದ್ರ ಸಚಿವ ಡಾ.ಸುಬ್ಬರಾಮಿ ರೆಡ್ಡಿ, ಮತ್ತು ರಾಜಕೀಯ ಮುಖಂಡರು ಉಪಸ್ಥಿತರಿದ್ದು, ಸುಮಾರು 40 ಮಂದಿ ಉದ್ಯಮಿಗಳಿಗೆ ಈ ಸಂದರ್ಭ ಸನ್ಮಾನಿಸಲಾಯಿತು.

ಸರ್ವಜ್ಞ ಪೀಠವನ್ನೇರುವ ಸಂದರ್ಭದಲ್ಲಿ ಹಿಂದಿನ ಪರ್ಯಾಯ ಪೀಠಾಧಿಪತಿಗಳು ಅಕ್ಷಯ ಪಾತ್ರೆ, ಸಟ್ಟುಗ ಹಾಗೂ ಕೀಲಿಕೈಗಳನ್ನು ತಮ್ಮ ಕೈಯಿಂದಲೇ ಹೊಸ ಪರ್ಯಾಯ ಶ್ರೀಗಳಿಗೆ ಹಸ್ತಾಂತರ ಮಾಡಬೇಕಿತ್ತು. ಆದರೆ ಇದು ನಡೆದಿಲ್ಲ. ಇವುಗಳನ್ನು ಒಪ್ಪಿಸಿದ್ದು ಅಷ್ಟಮಠಗಳ ಉಪಮಠವಾದ ಭೀಮನಕಟ್ಟೆ ಮಠದ ರಘುಮಾನ್ಯ ತೀರ್ಥ ಸ್ವಾಮೀಜಿ!

ಇನ್ನೂ ಆಸಕ್ತಿದಾಯಕ ವಿಷಯವೆಂದರೆ, ಪಲಿಮಾರು, ಕಾಣಿಯೂರು, ಪೇಜಾವರ ಕಿರಿಯ ಸ್ವಾಮಿಗಳು, ಅದಮಾರು ಹಿರಿಯ ಮತ್ತು ಕಿರಿಯ ಸ್ವಾಮಿಗಳು ಮಠದ ಆವರಣವನ್ನೇ ಬಿಟ್ಟು ತೆರಳಿದ್ದರು.

ಸಂಪ್ರದಾಯದ ಪ್ರಕಾರ, ನಿರ್ಗಮನ ಶ್ರೀಗಳು ನಿರ್ಮಾಲ್ಯ ವಿಸರ್ಜನೆಯ ಬಳಿಕ ಹೊಸ ಸ್ವಾಮೀಜಿ ಆಗಮಿಸುವವರೆಗೂ ಮಠದಲ್ಲಿರಬೇಕು. ದ್ವಾರದಲ್ಲಿ ಹೊಸ ಪರ್ಯಾಯ ಶ್ರೀಗಳನ್ನು ಸ್ವಾಗತಿಸಿ, ಸರ್ವಜ್ಞ ಪೀಠಾರೋಹಣ ಮಾಡುವಂತೆ ಕೋರಿಕೊಳ್ಳಬೇಕು. ಪುತ್ತಿಗೆ ಶ್ರೀಗಳು ಆಗಮಿಸುವ ಮೊದಲು, ನಿರ್ಗಮನ ಪರ್ಯಾಯ ಸ್ವಾಮೀಜಿಯಾದ ಕೃಷ್ಣಾಪುರ ಶ್ರೀಗಳು ತಮ್ಮ ಅವಧಿಯ ಕೊನೆಯ ನಿರ್ಮಾಲ್ಯ ವಿಸರ್ಜನೆ ನೆರವೇರಿಸಿ ಮಠದಿಂದ ಹೊರ ಹೋಗಿದ್ದರು. ಹಾಗಾಗಿ ಈ ಸಂಪ್ರದಾಯವೂ ನೆರವೇರಲಿಲ್ಲ.

ಇದಕ್ಕಿಂತ ಮುಂಚಿತವಾಗಿ, ನಿನ್ನೆ ತಡರಾತ್ರಿಯವರೆಗೂ ರಾಘವೇಂದ್ರ ಮಠ, ಪೇಜಾವರ, ಪಲಿಮಾರು ಮಠದ ಸ್ವಾಮಿಗಳು ಕುಳಿತು ಮಾತುಕತೆ ನಡೆಸಿದರಾದರೂ ಒಂದು ಒಮ್ಮತಕ್ಕೆ- ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಹಿಂದೆ ಸಮುದ್ರೋಲ್ಲಂಘನವಾಗಿದೆ ಎಂಬ ಒಂದೇ ಒಂದು 'ಉಲ್ಲಂಘನೆ'ಯ ಕುರಿತಾಗಿ ಮಾತುಕತೆಗಳು ಕೇಳಿಬರುತ್ತಿದ್ದವು. ಆದರೆ ಕೃಷ್ಣನ ನಾಡಿನಲ್ಲಿ ಇದೇ ಮೊದಲ ಬಾರಿಗೆ ಲೆಕ್ಕಕ್ಕೆ ಸಿಗದಷ್ಟು 'ಉಲ್ಲಂಘನೆ'ಗಳು ನಡೆದುಹೋಗಿದ್ದು ಈ ಬಾರಿಯ ಮತ್ತೊಂದು ವಿಶೇಷ ಎನ್ನಬಹುದೇನೋ?
ಮತ್ತಷ್ಟು
ಒಡೆದ ಪೈಪ್: ಅಂಡರ್‌‌ಪಾಸ್ ನಿರ್ಮಾಣಕ್ಕೆ ಅಡ್ಡಿ
ಗೋಕಾಕ್ ಮಾರ್ಕೆಟಿನಲ್ಲಿ ಭೀಕರ ಅಗ್ನಿ ಅನಾಹುತ
ಸಂಪ್ರದಾಯ ಮುರಿದು ಪೀಠವೇರಿದ ಪುತ್ತಿಗೆ ಶ್ರೀ
ನವರಾತ್ರಿ ವೇಳೆಗೆ ವಿಶ್ವ ಮಾಧ್ವ ಮಠ: ಪುತ್ತಿಗೆ ಶ್ರೀ
7 ಯತಿಗಳ ಗೈರು: ಪರ್ಯಾಯ ಪೀಠವೇರಿದ ಪುತ್ತಿಗೆ ಶ್ರೀ
ಆಡ್ವಾಣಿ ಭೇಟಿಯಿಂದ ಬಿಜೆಪಿ ಚಟುವಟಿಕೆ ಬಿರುಸು