ಇದೊಂದು ಕೊಲೆಗಡುಕ ಕುಟುಂಬ. ಹಲವು ವರ್ಷಗಳಿಂದೀಚೆಗೆ ಪತಿ-ಪತ್ನಿ-ಮಗ ಸೇರಿಕೊಂಡು 21 ಜನರನ್ನು ಕೊಂದು ಹಾಕಿದ್ದಾರೆ. ಬೆಂಗಳೂರು ಮತ್ತು ಮಹಾರಾಷ್ಟ್ರದ ಕೆಲವು ಭಾಗ ಇವರ ಕಾರ್ಯಾಚರಣೆಗೆ 'ಬಲಿ'ಯಾಗಿದೆ!
ಬಾಕಿ ಬಾಡಿಗೆ ಹಣ ಕೇಳಿದ್ದಕ್ಕಾಗಿ ಮನೆಯೊಡೆಯನನ್ನು ಕೊಂದ ಆರೋಪದಲ್ಲಿ ಇವರು ಬಂಧಿತರಾದ ಬಳಿಕ ಈ ಪುಟ್ಟ ಕುಟುಂಬದ ಮುಖ್ಯಸ್ಥ ತಪ್ಪೊಪ್ಪಿಕೊಂಡಿದ್ದಾನೆ.
ಮುಖ್ಯ ಆರೋಪಿ ಚಂದ್ರಕಾಂತ್ ಎಸ್.ಶರ್ಮಾ (48), ಪತ್ನಿ ಹರ್ಷಾ (43) ಮತ್ತು ಮಗ ಮೊಂಟೋ (21) ಅವರನ್ನು ಹೆಣ್ಣೂರು-ಬಾಣಸವಾಡಿ ಲೇಔಟ್‌ನಲ್ಲಿ ಜನವರಿ 12ರಂದು ಬಂಧಿಸಲಾಗಿತ್ತು.
62ರ ಹರೆಯದ ಮನೆಯೊಡೆಯ ರಾಘವನ್ ಅವರು ಶರ್ಮಾ ಮನೆಗೆ ಹೋದವರು ಮರಳಿ ಬಂದಿಲ್ಲ ಎಂದು ಮಗ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ಬಯಲಾಗಿದೆ.
ಹಲವು ಬಾರಿ ಕೇಳಿಕೊಂಡಿದ್ದರೂ ಶರ್ಮಾ, ಬಾಡಿಗೆ ಹಣ ನೀಡಿರಲಿಲ್ಲ. ನಾಸಿಕ್‌ನವನಾದ ಚಂದ್ರಕಾಂತ ಶರ್ಮಾ, ತಾನೊಬ್ಬ ವೃತ್ತಿಪರ ಫೋಟೋಗ್ರಾಫರ್/ವೀಡಿಯೋಗ್ರಾಫರ್ ಎಂದು ಹೇಳಿಕೊಂಡು ಬಾಡಿಗೆ ಮನೆ ಪಡೆದಿದ್ದ.
ಜ.10ರಂದು ಬಾಡಿಗೆ ಹಣ ಪಡೆಯಲು ತನ್ನ ಮನೆಗೆ ಬರುವಂತೆ ಶರ್ಮಾ ರಾಘವನ್‌ರನ್ನು ಆಹ್ವಾನಿಸಿದ. ಮನೆಗೆ ಬಂದ ರಾಘವನ್‌ರನ್ನು ಮೂವರೂ ಸೇರಿಕೊಂಡು ಕತ್ತು ಹಿಸುಕಿ ಕೊಂದು, ಶವವನ್ನು ತಮಿಳುನಾಡಿನ ಕೃಷ್ಣಗಿರಿಗೆ ಕೊಂಡೊಯ್ದು ಸುಟ್ಟುಹಾಕಿದರು ಎಂದು ಡಿಸಿಪಿ ಅಲೋಕ್ ಕುಮಾರ್ ಅವರು ಸುದ್ದಿಗಾರರಿಗೆ ವಿವರಿಸಿದ್ದಾರೆ.
ನಗರಕ್ಕೆ ಮರಳಿದ ಬಳಿಕ, ತಾನೀಗಾಗಲೇ 20 ಮಂದಿಯನ್ನು ಕೊಂದಿದ್ದೇನೆ, ಇದುವರೆಗೆ ತನ್ನ ಬಂಧನವಾಗಿಲ್ಲ ಎಂದು ಶರ್ಮಾ ತನ್ನ ಪತ್ನಿ ಮತ್ತು ಮಗನಿಗೆ ಹೇಳಿದ.
1978-1981ರ ನಡುವೆ ಹಣಕಾಸು ವಿಷಯಕ್ಕೆ ಸಂಬಂಧಿಸಿ ತಗಾದೆ ತೆಗೆದು 20 ಮಂದಿಯನ್ನು ಕೊಂದಿರುವುದಾಗಿ ಆತ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದರು.
ತಾನಿದ್ದ ಬಾಡಿಗೆ ಮನೆಯನ್ನು ಶರ್ಮಾ ಸುಮಾರು 1.5 ಕೋಟಿ ರೂ.ಗೆ ಮಾರಾಟ ಮಾಡಿದ್ದು, ಅದರಲ್ಲಿ 50 ಲಕ್ಷ ರೂ. ಹಣವನ್ನು ಮುಂಗಡವಾಗಿ ಪಡೆದಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.
|