ಧಾರ್ಮಿಕ ಕ್ಷೇತ್ರದಲ್ಲಿನ ಸಾಧನೆಗಳ ಮೂಲಕ ಅಭಿಮಾನಿ ಭಕ್ತರ ಭಕ್ತಿ-ಪ್ರೀತಿಗಳನ್ನು ಗಳಿಸಿರುವುದೇ ಅಲ್ಲದೇ ಶಿಕ್ಷಣ ರಂಗದಲ್ಲೂ ಕ್ರಾಂತಿಯನ್ನೇ ಉಂಟುಮಾಡಿರುವ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರಿಗೆ ಇಂದು 64ನೇ ಜನ್ಮದಿನ.
ಈ ಹಿನ್ನೆಲೆಯಲ್ಲಿ ನಗರದ ಸಿರ್ಸಿ ವೃತ್ತದಲ್ಲಿರುವ ಸಿ.ಎ.ಆರ್. ಮೈದಾನದಲ್ಲಿ ಗುರುಗಳ ಜನ್ಮದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮೈಸೂರು ರಸ್ತೆಯ ಸಿರ್ಸಿ ವೃತ್ತದಿಂದ ಪುರಭವನದವರೆಗಿನ ಮೇಲು ಸೇತುವೆಗೆ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಹೆಸರನ್ನಿಡುವ ಕಾರ್ಯಕ್ರಮವೂ ಇಂದು ನಡೆಯಲಿದೆ.
ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಗಣ್ಯ ವ್ಯಕ್ತಿಗಳು, ಹಲವು ಮಠಾಧೀಶರುಗಳು ಪಾಲ್ಗೊಳ್ಳುವ ಈ ಸಮಾರಂಭದ ಸಲುವಾಗಿ ಬೆಂಗಳೂರು ಸಿಂಗಾರಗೊಂಡು ಸಂಭ್ರಮಿಸುತ್ತಿದೆ. ಬಂಟಿಂಗ್‌ಗಳು-ಹೂಮಾಲೆಗಳು-ತಳಿರು ತೋರಣಗಳ ಸರಮಾಲೆ ಇಡೀ ವಾತಾವರಣವನ್ನು ಸಂಭ್ರಮದ ಗೂಡನ್ನಾಗಿಸಿದೆ.
ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ ಅಬ್ದುಲ್ ಕಲಾಂರವರು ಸಮಾರಂಭವನ್ನು ಉದ್ಘಾಟಿಸಲಿದ್ದು ರಾಜ್ಯಪಾಲ ರಾಮೇಶ್ವರ ಠಾಕೂರ್‌ರವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಮಠದ ವಿದ್ಯಾರ್ಥಿ - ವಿದ್ಯಾರ್ಥಿನಿ ನಿಲಯಗಳ ಮತ್ತು ಎಸ್.ಎ.ಸಿ.ಬಿ.ಎಂ. ವಿದ್ಯಾಲಯದ ನೂತನ ಕಟ್ಟಡಗಳ ಉದ್ಘಾಟನೆಯೂ ಆಗಲಿದೆ ಎಂದು ತಿಳಿದುಬಂದಿದೆ.
|