ಧಾರ್ಮಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಸೇವೆ ಸಲ್ಲಿಸಿರುವ ಬಾಲಗಂಗಾಧರ ಸ್ವಾಮೀಜಿಯವರು ಇದೀಗ ಆರೋಗ್ಯ ಕ್ಷೇತ್ರಕ್ಕೂ ವಿಸ್ತರಿಸಿರುವುದು ಶ್ಲಾಘನೀಯ ಎಂದು ಮಾಜಿ ರಾಷ್ಟ್ತ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ತಿಳಿಸಿದ್ದಾರೆ.
ಬಾಲ ಗಂಗಾಧರನಾಥ ಸ್ವಾಮೀಜಿಯವರ 64ನೇ ಜನ್ಮದಿನದ ಅಂಗವಾಗಿ ಇಂದು (ಶನಿವಾರ) ನೂತನ ನರವಿಜ್ಞಾನ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಸಂಸ್ಥೆ ಜನರ ಆಶೋತ್ತರಗಳಿಗೆ ಸ್ಪಂದಿಸುವಂತಹ ಕೆಲಸ ಮಾಡಲಿ. ಈ ಮೂಲಕ ನರರೋಗದಿಂದ ಬಳಲುತ್ತಿರುವ ಸಾವಿರಾರು ಜನರಿಗೆ ಪ್ರಯೋಜನವಾಗಲಿ ಎಂದು ಆಶಿಸಿದರು.
ಈ ಸಮಾರಂಭಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ಲೋಬಲ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ಅಧ್ಯಕ್ಷ ಡಾ. ರವೀಂದ್ರನಾಥ್, ನರ ಸಂಬಂಧಿ ರೋಗಗಳ ಚಿಕಿತ್ಸೆಗೆಂದೇ ಈ ಸಂಸ್ಥೆ ಹೊಸ ಹೆಜ್ಜೆಯನ್ನು ಇಟ್ಟಿದೆ. ನರವಿಜ್ಞಾನ, ಬ್ರೈನ್ ಸೆಂಟರ್, ನ್ಯೂರೋಕ್ರಿಟಿಕಲ್ ಕೇರ್‌ಗಳಂತ ಸೌಲಭ್ಯಗಳು ಇಲ್ಲಿ ದೊರೆಯಲಿವೆ ಎಂದು ವಿವರಿಸಿದರು.
ನರರೋಗ ತಜ್ಞ ಹಾಗೂ ಆಸ್ಪತ್ರೆಯ ಉಪಾಧ್ಯಕ್ಷ ಡಾ. ಎನ್.ಕೆ. ವೆಂಕಟ್ರಾಮನ್ ಮಾತನಾಡಿ ಆಸ್ಪತ್ರೆಯಲ್ಲಿರುವ ಸೌಲಭ್ಯಗಳನ್ನು ಬಡವರಿಂದ ಶ್ರೀಮಂತರವರೆಗೆ ತಲುಪಿಸುವುದೇ ಮುಖ್ಯ ಗುರಿ. ಇದಕ್ಕಾಗಿ ಸುಸಜ್ಜಿತ ತಂತ್ರಜ್ಞಾನ ಸೌಕರ್ಯಗಳನ್ನು ಹಾಗೂ ಆತ್ಯಾಧುನಿಕ ಸೌಲಭ್ಯಗಳನ್ನು ಈ ಸಂಸ್ಥೆ ಹೊಂದಿದೆ ಎಂದು ತಿಳಿಸಿದರು.
|