ಕನ್ನಡಕ್ಕೆ ಶಾಸ್ತ್ತ್ರೀಯ ಸ್ಥಾನಮಾನ, ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರ ನಡೆಯುತ್ತಿರುವ ಅನ್ಯಾಯ ಸೇರಿದಂತೆ ಕನ್ನಡಿಗರ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯವನ್ನು ಖಂಡಿಸಿ ಈ ತಿಂಗಳ 27ರಂದು ರೈಲು ಸಂಚಾರ ಬಂದ್ ಚಳವಳಿಯನ್ನು ನಡೆಸಲಾಗುವುದು ಎಂದು ಗಡಿ ಹೋರಾಟ ಸಮಿತಿ ಅಧ್ಯಕ್ಷ ಮಾಜಿ ಶಾಸಕ ವಾಟಾಳ್ ನಾಗರಾಜ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 27ರಂದು ಬೆಳಿಗ್ಗೆ 6ಗಂಟೆಯಿಂದ ಸಂಜೆ 6ರವರೆಗೆ ರಾಜ್ಯಾದ್ಯಂತ 600 ರೈಲ್ವೆ ನಿಲ್ದಾಣಗಳಲ್ಲಿ ರೈಲ್ವೆ ಸಂಚಾರಕ್ಕೆ ತಡೆಯೊಡ್ಡುವ ಮೂಲಕ ಪ್ರತಿಭಟನೆ ನಡೆಸಲಾಗುವುದುಎಂದು ತಿಳಿಸಿದರು.
ರಾಜ್ಯದಲ್ಲಿ ಕನ್ನಡಿಗರನ್ನು ಕಡೆಗೆಣಿಸಲಾಗಿದ್ದು, ಕನ್ನಡಿಗರಿಗೆ ಸೂಕ್ತ ಸ್ಥಾನಮಾನ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಬೇಡಿಕೆಗಳನ್ನು ಮುಂದಿರಿಸಿಕೊಂಡು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಸರೋಜಿನಿ ಮಹಿಷಿ ವರದಿ, ವಾಟಾಳ್ ವರದಿ ಹಾಗೂ ಬರಗೂರು ವರದಿಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಈ ಪ್ರತಿಭಟನೆಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಜನವರಿ 27ರ ಬಳಿಕ ಹಂತಹಂತವಾಗಿ ಹೋರಾಟವನ್ನು ನಡೆಸಲಾಗುವುದು. ಅಲ್ಲದೆ, ರಾಜ್ಯದ ಸಂಸದರು ಸಂಸತ್ನಲ್ಲಿ ಕನ್ನಡದ ಕಹಳೆ ಮೊಳಗಿಸುವಂತೆ ಅಗ್ರಹಿಸಲಾಗಿದೆ. ಈ ಬಗ್ಗೆ ಮುಂದಿನ ತಿಂಗಳು 17ರಂದು ಪ್ರಧಾನಿ ನಿವಾಸದ ಎದುರು ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ನಂಜುಂಡಪ್ಪ ವರದಿ ಅನುಷ್ಠಾನ ಜಾರಿಗೆ ತೆಲಂಗಾಣ ಮಾದರಿಯಲ್ಲಿ ಹೋರಾಟ ನಡೆಸಲಾಗುವುದು, ಆದರೆ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ತಮ್ಮ ಬೇಡಿಕೆ ಇಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
|