ಬಿಎಂಟಿಸಿ ಬಸ್ಸಿನ ಅವಾಂತರಕ್ಕೆ ಎರಡು ವರ್ಷದ ಬಾಲಕನೊರ್ವ ಬಲಿಯಾದ ಘಟನೆ ಭಾನುವಾರ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಜೆ.ಸಿ.ನಗರ ಪ್ರದೇಶದ ಟಿ.ವಿ. ಟವರ್ ಪರಿಸರದಲ್ಲಿ ಈ ದುರ್ಘಟನೆ ನಡೆದಿದ್ದು, ಪರಿಸರದ ಸಾರ್ವಜನಿಕರ ಆಕ್ರೋಶಕ್ಕೆ ಇದು ಕಾರಣವಾಯಿತು. ಪರಿಸ್ಥಿತಿ ಉದ್ವಿಗ್ನತೆಗೆ ತಿರುಗಿ ಹತ್ತಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳು ಜಖಂಗೊಂಡವು.
ಭಾನುವಾರ ಮಧ್ಯಾಹ್ನ ಮೂರು ಘಂಟೆಯ ಸುಮಾರಿಗೆ ಜೆ.ಸಿ.ನಗರ ಪರಿಸರದಲ್ಲಿ ಅತಿವೇಗದಲ್ಲಿ ಚಲಾಯಿಸುತ್ತಿದ್ದ ಬಿಎಂಟಿಸಿ ಬಸ್‌ಗೆ ಎರಡರ ಹರೆಯದ ನಿರಂಜನ್ ಕುಮಾರ್ ಸಿಲುಕಿ ಮೃತ ಪಟ್ಟ ಘಟನೆ ನಾಗರೀಕರನ್ನು ಕೆರಳಿಸಿತು. ಚಾಲಕನ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣ ಎಂಬ ನಾಗರೀಕರ ಆಕ್ರೋಶ, ಆ ಪರಿಸರದಲ್ಲಿ ಚಲಿಸುತ್ತಿದ್ದ ಇತರ ಬಿಎಂಟಿಸಿ ಬಸ್ಸುಗಳ ಮೇಲೆಯೂ ತಿರುಗಿತು. ಇದರಿಂದ ಹತ್ತಕ್ಕೂ ಹೆಚ್ಚು ಬಸ್‌ಗಳು ಕಲ್ಲೆಟಿನಿಂದ ತೀವ್ರ ಜಖಂಗೊಂಡವು.
ಪೊಲೀಸರ ನಿರ್ಲಕ್ಷ್ಯ:
ಘಟನೆ ನಡೆದು ಅರ್ಧ ಗಂಟೆ ಕಳೆದರೂ ಸ್ಥಳಕ್ಕೆ ಆಗಮಿಸದ ಪೊಲೀಸರ ಬಗ್ಗೆ ಆಕ್ರೋಶ ಭರಿತರಾದ ನಾಗರಿಕರು ಏಕಾಏಕಿ ರಸ್ತೆ ತಡೆ ನಡೆಸಿದರು. ನಗರದಲ್ಲಿ ಈಗಾಗಲೇ ಇಂತಹ ಅನೇಕ ಪ್ರಕರಣಗಳು ನಡೆದಿದ್ದರೂ, ಬಿಎಂಟಿಸಿ ಬಸ್ ಚಾಲಕರು ಉಢಾಫೆಯ ವರ್ತನೆಯಿಂದಾಗಿ ಮುಗ್ಧ ಜನರ ಪ್ರಾಣ ಹರಣ ಮಾಡುತ್ತಿದ್ದಾರೆಂದು ಆಕ್ಷೇಪಿಸಿದರು.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯ ನಿಯಂತ್ರಣಕ್ಕೆ ಹೆಣಗಾಡಬೇಕಾಯಿತು. ಅಪಘಾತಕ್ಕೆ ಕಾರಣನಾದ ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ನಾಗರಿಕರ ಮನವೊಲಿಸಲು ತೀವ್ರ ಪ್ರಯತ್ನ ನಡೆಸಿದರು. ಈ ಘಟನೆಯಿಂದಾಗಿ ಜೆ.ಸಿ.ನಗರ, ಆರ್.ಟಿ. ನಗರ, ಯಲಹಂಕ ಮೊದಲಾದೆಡೆ ಸಂಚರಿಸುವ ಬಸ್ ವ್ಯವಸ್ಥೆಯೂ ಏರುಪೇರಾಯಿತು. ಘಟನೆಗೆ ಸಂಬಂಧಿಸಿ ಜೆ.ಸಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
|