ಖಾಸಗಿ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಲಾರಿ ಮಾಲೀಕರು ರಾಜ್ಯಾದ್ಯಂತ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರವು ಭಾನುವಾರ ಮಧ್ಯರಾತ್ರಿಯಿಂದ ಪ್ರಾರಂಭಗೊಂಡಿದ್ದು, ಖಾಸಗಿ ಬಸ್, ಮ್ಯಾಕ್ಸಿ ಕ್ಯಾಬ್ ಮತ್ತು ಟೂರಿಸ್ಟ್ ಟ್ಯಾಕ್ಸಿಗಳು ರಸ್ತೆಗಿಳಿಯದೆ ಜನ ಪರದಾಡುವಂತಾಗಿದೆ.
ಅತ್ತ ಲಾರಿ ಮುಷ್ಕರ ಪ್ರಾರಂಭವಾಗುತ್ತಿದ್ದಂತೆ ಇತ್ತ ತರಕಾರಿ ಬೆಲೆಗಳು ಏರಿಕೆ ಕಂಡು ಬಂದಿದೆ. ಅಲ್ಲದೆ, ಡೀಸೆಲ್, ಪೆಟ್ರೋಲ್ ಪೂರೈಕೆಗೆ ವ್ಯತ್ಯಯವಾಗಿದೆ.
ರಾಜ್ಯಾದ್ಯಂತ ಸುಮಾರು 33 ಲಕ್ಷ ಖಾಸಗಿ ವಾಹನಗಳ ಮುಷ್ಕರದಿಂದ ಬೆಳಗ್ಗೆಯಿಂದಲೇ ಖಾಸಗಿ ವಾಹನಗಳ ಸಂಚಾರವಿಲ್ಲದೆ, ಐಟಿ ಬಿಟಿ ಕಂಪೆನಿಗಳ ಉದ್ಯೋಗಸ್ಥರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಕೆಲವು ಕಂಪೆನಿಗಳು ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದವು. ಶಾಲಾ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಹೋಟೆಲ್ ಉದ್ಯಮಕ್ಕೆ ಮುಷ್ಕರದಿಂದ ಅಗತ್ಯ ವಸ್ತುಗಳ ಪೂರೈಕೆ ಸಾಧ್ಯವಾಗದೆ ಪರದಾಡುವಂತಾಯಿತು.
ಇದರ ಪರಿಣಾಮವಾಗಿ ಈಗಾಗಲೇ ಗ್ರಾಹಕ ಮತ್ತು ಪ್ರಯಾಣಿಕರ ಮೇಲೆ ಪ್ರತಿಕೂಲ ಪರಿಣಾಮ ಆಗಲಿದೆ. ಅಗತ್ಯ ವಸ್ತುಗಳ ಸಾಗಾಟಕ್ಕೆ ಬ್ರೇಕ್ ಬಿದ್ದಿರುವುದರಿಂದ ವಸ್ತುಗಳ ಬೆಲೆಗಳಲ್ಲಿ ಏರಿಕೆ ಕಂಡು ಬಂದಿದೆ. ಆದರೆ ಲಾರಿ ಮಾಲೀಕರ ಮುಷ್ಕರದಲ್ಲಿ ಹಾಲು, ತರಕಾರಿ, ಔಷಧಿ, ಪತ್ರಿಕೆ, ಆಂಬ್ಯುಲನ್ಸ್ ಮೊದಲಾದ ದಿನನಿತ್ಯ ಬಳಕೆಗೆ ರಿಯಾಯಿತಿ ನೀಡಿದ್ದು, ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ತಿಳಿಸಿದ್ದರು.
ತಮ್ಮ ಬೇಡಿಕೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸುವವರೆಗೂ ಮುಷ್ಕರ ಮುಂದುವರಿಸಲಾಗುವುದು. ವೇಗ ನಿಯಂತ್ರಕ ಅಳವಡಿಕೆಯನ್ನು ರಾಜ್ಯದಲ್ಲಿ ಮಾತ್ರ ಜಾರಿಗೊಳಿಸಿರುವುದು ದುರದೃಷ್ಟಕರ. ಇದನ್ನು ಇನ್ನೊಮ್ಮೆ ಪರೀಶೀಲಿಸಬೇಕೆಂದು ಒತ್ತಾಯಿಸಿ ಲಾರಿ ಮಾಲಿಕರ ಸಂಘ ಮುಷ್ಕರಕ್ಕೆ ಕರೆ ನೀಡಿತ್ತು.
|