ಉಗ್ರಗಾಮಿಗಳು ವಿಮಾನನಿಲ್ದಾಣದ ಮೇಲೆ ದಾಳಿ ಮಾಡಬಹುದೆಂಬ ಸುಳಿವು ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೂ ಅಗತ್ಯ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ವಿಮಾನ ನಿಲ್ದಾಣದ ಮುಖ್ಯಸ್ಥರಿಗೆ ಆದೇಶಿಸಿದೆ ಎಂದು ತಿಳಿದುಬಂದಿದೆ.
ರಾಜೀವ್ ಗಾಂಧಿಯವರ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಲ್‌ಟಿಟಿಇ ಸಂಘಟನೆಯ ಶಿವರಸನ್ ಬೆಂಗಳೂರು ಹೊರವಲಯದ ಕೋಣನಕುಂಟೆಯಲ್ಲಿ ಅಡಗಿಕೊಂಡು ನಂತರ ಪೊಲೀಸರ ದಾಳಿಯಲ್ಲಿ ಜೀವತೆತ್ತ. ಅಂದಿನಿಂದಲೂ ಬೆಂಗಳೂರು ಹಲವು ಉಗ್ರರ ಚಟುವಟಿಕೆಗಳ ತಾಣವಾಗಿರುವುದರ ಕುರಿತು ಸ್ಪಷ್ಟ ಸೂಚನೆ ಸಿಕ್ಕಿತ್ತು.
ಈ ಹಿಂದೆ ಉಗ್ರರು ಎಂದರೆ ಎಲ್‌ಟಿಟಿಇ ಸಂಘಟನೆ ಮಾತ್ರ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಆ ನಂಬಿಕೆ ಈಗ ಹುಸಿಯಾಗಿದೆ. ಈ ಸಂಘಟನೆ ಮಾತ್ರವಲ್ಲದೆ ಉಲ್ಫಾ ಹಾಗೂ ಇನ್ನಿತರ ಅನೇಕ ಉಗ್ರರ ಸಂಘಟನೆಗಳು ಬೆಂಗಳೂರಿನಲ್ಲಿ ಬೇರುಬಿಟ್ಟಿವೆ ಎಂಬ ಶಂಕೆ ದಟ್ಟವಾಗಿ ಕಂಡು ಬಂದಿದೆ.
ಏಕೆಂದರೆ ಬೆಂಗಳೂರೂ ಸೇರಿದಂತೆ ರಾಷ್ಟ್ರದ ಪ್ರಮುಖ ನಗರಗಳಲ್ಲಿನ ಜೈಲುಗಳಲ್ಲಿ ಈ ಸಂಘಟನೆಗಳ ಉಗ್ರರ ಸಹಚರರುಗಳು ಶಿಕ್ಷೆಯನ್ನನುಭವಿಸುತ್ತಿದ್ದು, ಅವರನ್ನು ಬಿಡಿಸಿಕೊಳ್ಳಲು ಉಲ್ಫಾ ಸೇರಿದಂತೆ ಹಲವು ಉಗ್ರ ಸಂಘಟನೆಗಳು ವಿಮಾನಗಳನ್ನು ಅಪಹರಿಸಿ ಬೆದರಿಕೆ ಒಡ್ಡಬಹುದು ಹಾಗೂ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಬಹುದು ಎಂದು ಕೇಂದ್ರ ಸರ್ಕಾರವು ಸಂದೇಹಿಸಿದೆ.
ತೀರಾ ಇತ್ತೀಚೆಗೆ ಹೈದರಾಬಾದಿನಲ್ಲಿ ಬಾಂಬ್ ಸ್ಫೋಟದಂತಹ ಅನಾಹುತಕಾರೀ ಘಟನೆಗಳು ನಡೆದಿರುವುದು ಎಲ್ಲರ ಮನದಲ್ಲಿ ಇನ್ನೂ ಹಸಿರಾಗಿ ನಿಂತಿದೆ.
|