ಸೌಂದರ್ಯ ಸ್ಪರ್ಧೆ ಮನುಷ್ಯರಿಗೆ ಮಾತ್ರ ಸೀಮಿತ ಅಂತ ಹೇಳಿದವರು ಯಾರು? ನಾವು ಯಾರಿಗೇನು ಕಡಿಮೆ ಎನ್ನುವಂತೆ ವಿಭಿನ್ನ ಶ್ವಾನ ತಳಿಗಳು ಚಾಂಪಿಯನ್‌ಷಿಪ್ ಸ್ಪರ್ಧೆಯಲ್ಲಿ ತಮ್ಮ ಬೆಡಗು ಬಿನ್ನಾಣಗಳನ್ನು ಅನಾವರಣಗೊಳಿಸಿದವು.
ಮೈಸೂರು ಕೆನ್ನೆಲ್ ಕ್ಲಬ್ ನಗರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ 86 ಮತ್ತು 87ನೇ ಅಖಿಲ ಭಾರತ ಚಾಂಪಿಯನ್‌ಷಿಪ್ ಶ್ವಾನ ಪ್ರದರ್ಶನದಲ್ಲಿ ಸುಮಾರು 450ಕ್ಕೂ ಹೆಚ್ಚಿನ ಶ್ವಾನಗಳು ತಮ್ಮ ಸೌಂದರ್ಯವನ್ನು ಪ್ರದರ್ಶಿಸಿದವು.
ಅಪರೂಪದ ತಳಿಗಳಾದ ಡ್ಯಾಶೌಂಡ್, ವಿಮರನೆರ್, ಫಾಕ್ಸ್ ಟೆರಿಯರ್, ಫಾಕ್ಸ್ ಹೌಂಡ್, ಜರ್ಮನ್ ಪಾಯಿಂಟರ್, ಮಿನಿಯೇಚರ್ ಸ್ಕಾ-ವನ್ಜರ್, ನೆಪೊಲಿಟನ್ ಮಸ್ಟಿಫ್, ಸಿಲ್ಕಿ ಟೆರೀರ್, ಕೂಲಿ, ಪೆಕಿಂಗೆಸ್ ಶ್ವಾನಗಳು ಸ್ಪರ್ಧೆಯಲ್ಲಿ ಮಿಂಚಿದರೂ, ಕೊನೆಗೆ ಇಂಗ್ಲಿಷ್ ಸ್ಟ್ತ್ರಿಂಗರ್ ಸ್ಪ್ಯಾನಿಲ್ 86ನೇ ಚಾಂಪಿಯನ್ ಹಾಗೂ 87ನೇ ಚಾಂಪಿಯನ್ ಜರ್ಮನ್ ಶೆಪರ್ಡ್ ನಾಯಿ ಉತ್ತಮ ಪ್ರದರ್ಶನ ಬಹುಮಾನವನ್ನು ತನ್ನದಾಗಿಸಿಕೊಂಡಿತು.
ಬೀದಿಬದಿಗಳಲ್ಲಿ ಕಾಣುವ ನಾಯಿಗಳು ಮಳೆಬಿಸಿಲೆನ್ನದೆ ಬಿದ್ದುಕೊಂಡಿರುವುದನ್ನು ನಾವೆಲ್ಲಾ ಕಂಡಿದ್ದೇವೆ. ಆದರೆ ಹವಾನಿಯಂತ್ರಿತ ಗೂಡಿನಲ್ಲಿ ಸುಖ ಅನುಭವಿಸುವ ಇಂಥ ಶ್ವಾನಗಳು ಬಿಸಿಲಿನ ಝಳಕ್ಕೆ ಹೊಂದಿಕೊಳ್ಳಲಾಗದೆ ಒದ್ದಾಡುತ್ತಿದ್ದುದು ಎಲ್ಲರ ಗಮನ ಸೆಳೆಯುತ್ತಿತ್ತು. ಇದಕ್ಕೆ ಥಾಯ್ಲೆಂಡ್ ಸಣ್ಣ ಜಾತಿಯ ಹಾಸ್ಕರ್ ಕೂಡ ಹೊರತಾಗಿರಲಿಲ್ಲ. ಆದರೆ ಅಲ್ಲಿ ಭಾಗವಹಿಸಿದ್ದ ನಾಯಿಗಳು ಬಹುಮಾನ ಪಡೆಯಲು ತುಂಬಾ ಉತ್ಸಾಹದಿಂದ ಪಾಲ್ಗೊಂಡಿದ್ದಂತೂ ಕಣ್ಣಿಗೆ ಹಬ್ಬವನ್ನುಂಟುಮಾಡಿತ್ತು.
|