ಸಾಮೂಹಿಕ ನಾಯಕತ್ವದಲ್ಲಿ ವಿಧಾನಸಭಾ ಚುನಾವಣೆಗಳನ್ನು ಎದುರಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುವುದು ರಾಜ್ಯ ಕಾಂಗ್ರೆಸ್ಸಿನಲ್ಲಿ ವಿಭಿನ್ನ ಸಂಚಲನೆಗಳನ್ನು ಉಂಟುಮಾಡಿದೆ.
ಈಗಾಗಲೇ ರಾಜ್ಯ ಕಾಂಗ್ರೆಸ್ ಒಡೆದ ಮನೆಯಂತಾಗಿದ್ದರೂ ಅದನ್ನು ಹೊರಗಡೆ ಎಲ್ಲೂ ಹೇಳಿಕೊಳ್ಳುವಂತಹ ಪರಿಸ್ಥಿತಿ ಇಲ್ಲ. ಕಾರಣ ಸದ್ಯದಲ್ಲಿಯೇ ಚುನಾವಣೆಗಳು ಬರಲಿರುವುದರಿಂದ ಅದು ಪಕ್ಷದ ಇಮೇಜ್ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದು ಎಂಬ ಭಾವನೆಯೂ ನಾಯಕರಲ್ಲಿದೆ. ವೀರಪ್ಪ ಮೊಯ್ಲಿ, ಜನಾರ್ದನ ಪೂಜಾರಿ ಹಾಗೂ ಆಸ್ಕರ್ ಫರ್ನಾಂಡಿಸ್ ಇವರೇ ಮೊದಲಾದ ನಾಯಕರು ಕರಾವಳಿ ಪ್ರದೇಶದಲ್ಲಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತಿದ್ದರೆ, ರಾಜ್ಯ ರಾಜಧಾನಿಯಲ್ಲಿರುವ ಮತ್ತೆರಡು ಬಣಗಳು ಹೈಕಮಾಂಡಿನ ಈ ನಿರ್ಧಾರದಿಂದಾಗಿ ಒಗ್ಗಟ್ಟನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿವೆ.
ಈ ಹಿಂದೆ ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣರನ್ನು ಮರಳಿ ತರಬೇಕು ಎಂಬ ಕೂಗುಗಳು ಅವರ ಕೆಲ ಹಿಂಬಾಲಕರಿಂದ ಹೊರಬಂದಾಗ, ಮಲ್ಲಿಕಾರ್ಜುನ ಖರ್ಗೆಯವರ ಬೆಂಬಲಿಗರು ಅದನ್ನು ಸ್ಪಷ್ಟವಾಗಿ ವಿರೋಧಿಸಿದ್ದರು. ಕೆಪಿಸಿಸಿ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಸುದ್ದಿಗಳು ಹಬ್ಬಿದಾಗ ಖರ್ಗೆಯವರ ಬೆಂಬಲಿಗರು ದೆಹಲಿವರೆಗೆ ಹೋಗಿ ಅದನ್ನು ವಿರೋಧಿಸಿದ್ದೂ ಉಂಟು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೀನಾಯ ಹಿನ್ನಡೆ ಉಂಟಾಗಲು ಎಸ್.ಎಂ.ಕೃಷ್ಣರೇ ಕಾರಣ. ಕೃಷ್ಣರ ಅನುಪಸ್ಥಿತಿಯಲ್ಲಿ ಪಕ್ಷವನ್ನು ನಡೆಸಿಕೊಂಡು ಬಂದ ಖರ್ಗೆಯವರನ್ನು ನಾಯಕರೆಂದು ಪ್ರತಿಬಿಂಬಿಸುವ ಬದಲು ನಾಯಕರನ್ನು ಎಲ್ಲಿಂದಲೋ ತಂದು ಹೇರುವುದು ಬೇಡ ಎಂಬುದು ಖರ್ಗೆ ಬೆಂಬಲಿಗರ ಒತ್ತಾಯವಾಗಿತ್ತು.
ಆದರೆ ಎಸ್.ಎಂ.ಕೃಷ್ಣ ಬೆಂಬಲಿಗರ ಅಭಿಪ್ರಾಯವೇ ಬೇರೆಯದಾಗಿತ್ತು. ಮಲ್ಲಿಕಾರ್ಜುನ ಖರ್ಗೆಯವರಿಗೆ ಕೃಷ್ಣರಂತೆ ಜನರನ್ನು ಸೆಳೆಯುವ ಚರಿಷ್ಮಾ ಇಲ್ಲ. ಜೆಡಿಎಸ್ ಹಾಗೂ ಬಿಜೆಪಿ ವಲಯದ ಆಕ್ರಮಣಕಾರೀ ರಾಜಕೀಯವನ್ನು ಡಿಪ್ಲೊಮ್ಯಾಟಿಕ್ ಆಗಿ ನಿರ್ವಹಿಸಲು ಖರ್ಗೆಯವರಿಗೆ ಅಸಾಧ್ಯ, ಅದಕ್ಕೆ ಕೃಷ್ಣರೇ ಸೂಕ್ತ ಎಂಬುದು ಅವರ ಅಭಿಪ್ರಾಯವಾಗಿತ್ತು. ಇದನ್ನು ಮನಗಂಡ ಹೈಕಮಾಂಡ್ ಒಂದು ಹಂತದಲ್ಲಿ ಕೃಷ್ಣರನ್ನು ರಾಜ್ಯಕ್ಕೆ ಮರಳಿಸಲು ಮುಂದಾಗಿತ್ತು ಕೂಡಾ.
ಆದರೆ ಇದು ಒಳಜಗಳಗಳಿಗೆ ನಾಂದಿ ಹಾಡಲಿದೆ ಎಂಬ ಸೂಕ್ಷ್ಮ ಗೊತ್ತಾದ ಕೂಡಲೇ ಅದು ಸಾಮೂಹಿಕ ನಾಯಕತ್ವದ ರಾಗವನ್ನು ಹಾಡಿದೆ. ಎಲ್ಲರೂ ಒಟ್ಟಾಗಿ ಹೋರಾಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಇದು ಸಹಾಯಕವಾಗಲಿದೆ ಎಂಬುದು ಹೈಕಮಾಂಡ್ ಆಶಯವಾಗಿರುವುದರಿಂದ ಚೆಂಡು ಮತ್ತೆ ಈಗ ರಾಜ್ಯ ನಾಯಕರ ಅಂಗಳಕ್ಕೇ ಬಂದು ನಿಂತಿದೆ. ಶತಾಯ ಗತಾಯ ಪಕ್ಷವನ್ನು ಅಧಿಕಾರದ ಹೊಸ್ತಿಲಿಗೆ ತರುವ ಜವಾಬ್ದಾರಿ ಈಗ ನಾಯಕರ ಕೈಲಿದೆ. ಒಳಜಗಳಗಳನ್ನೂ ಮೀರಿ ಅದು ಸಾಧ್ಯವಾಗುವುದೇ ಎಂಬುದೀಗ ಕುತೂಹಲಕಾರಿ ಅಂಶ.
|