ಖಚಿತ ಸುಳಿವನ್ನಾಧರಿಸಿ ನಗರದ ಎಸ್.ಪಿ.ರಸ್ತೆಯ ಎಲೆಕ್ಟ್ರಾನಿಕ್ಸ್ ದಾಸ್ತಾನು ಮಳಿಗೆಯೊಂದರ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಅಶ್ಲೀಲ ಚಿತ್ರಗಳನ್ನೊಳಗೊಂಡ ಸಿ.ಡಿ.ಗಳೂ ಸೇರಿದಂತೆ ಸುಮಾರು 50 ಲಕ್ಷ ರೂ ಮೌಲ್ಯದ ಅಕ್ರಮ ಸಿ.ಡಿ.ವಿತರಣಾ ಜಾಲವನ್ನು ಬಯಲಿಗೆಳೆದಿದ್ದಾರೆ.
ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರಗಳ ಕಾನೂನುಬಾಹಿರ ಸಿ.ಡಿ.ಗಳು ಇಲ್ಲಿ ಲಭ್ಯವಾಗಿದ್ದು ಅವು ತಮಿಳುನಾಡಿನಿಂದ ಸಿದ್ಧಗೊಂಡು ಬರುತ್ತಿದ್ದವು ಎನ್ನಲಾಗಿದೆ.
ಸಾಮಾನ್ಯವಾಗಿ ಹಿಂದಿ ಚಿತ್ರಗಳು ಬಿಡುಗಡೆಯಾದ ಮೇಲೆ ಮೂರು ತಿಂಗಳ ಅವಧಿಯ ನಂತರ ಸದರಿ ಚಿತ್ರಗಳ ಸಿ.ಡಿ.ಗಳು ಬಿಡುಗಡೆಯಾಗುತ್ತವೆ ಹಾಗೂ ಅಂಥ ಚಿತ್ರಗಳ ನಿರ್ಮಾಪಕರೇ ಸಿ.ಡಿ.ಗಳನ್ನು ಬಿಡುಗಡೆ ಮಾಡುತ್ತಾರೆ. ಆದರೆ ಈಗ ಸಿಕ್ಕಿರುವ ಸಿ.ಡಿ.ಗಳಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾದ ಚಿತ್ರಗಳೂ ಸೇರಿದ್ದು ಈ ಜಾಲದ ಹಸ್ತ ಎಲ್ಲಿಯವರೆಗೆ ಚಾಚಿರಬಹುದು ಎಂಬ ಬಗ್ಗೆ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.
ಈ ಸಂಬಂಧ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದ್ದು, ಸದರಿ ಗೋದಾಮಿನ ಮಾಲೀಕ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
|