ವೇಗ ನಿಯಂತ್ರಕಗಳನ್ನು ಅಳವಡಿಸುವುದಕ್ಕೆ ವಿರೋಧಿಸಿ ಖಾಸಗಿ ಸಾರಿಗೆ ಮತ್ತು ಸರಕು ಸಾಗಣೆದಾರರು ನಡೆಸುತ್ತಿರುವ ಮುಷ್ಕರದಿಂದ ಜನಸಾಮಾನ್ಯರಿಗೆ ಬಿಸಿ ತಟ್ಟಿತು. ರಾಜ್ಯಾದ್ಯಂತ ಎಲ್ಲ ಖಾಸಗಿ ಲಾರಿ, ಟ್ಯಾಕ್ಸಿ, ಡೀಸೆಲ್-ಪೆಟ್ರೌಲ್ ಟ್ಯಾಂಕರ್ಗಳು, ಬಸ್, ಇವೇ ಮೊದಲಾದವುಗಳು ರಸ್ತೆಗಿಳಿಯದಿದ್ದುದು ಮುಷ್ಕರದ ವಿಶೇಷತೆಯಾಗಿತ್ತು.
ಔಷಧಿ, ಹಾಲು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಸಾಗಣೆಗೆ ವಿನಾಯಿತಿ ನೀಡಲಾಗಿದ್ದರೂ, ಪ್ರಮುಖ ಸಾರಿಗೆ ಸಾಧನವಾಗಿ ಖಾಸಗಿ ಸಾರಿಗೆ ವಾಹನಗಳನ್ನು ಅವಲಂಬಿಸಿದ್ದ ಉದ್ಯೋಗಿಗಳು ಪರದಾಡಬೇಕಾಗಿ ಬಂತು. ಬೆಂಗಳೂರೂ ಸೇರಿದಂತೆ ಅನೇಕ ಸ್ಥಳಗಳಲ್ಲಿ ಈ ಪರಿಸ್ಥಿತಿ ಕಂಡುಬಂತು.
ಇವೆಲ್ಲಕ್ಕಿಂತ ಹೆಚ್ಚಿನ ಬಿಸಿ ತಟ್ಟಿದ್ದು ಗ್ರಾಮಾಂತರ ಪ್ರದೇಶಗಳಿಗೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ವರದಿಯ ಅನುಸಾರ ಖಾಸಗಿ ಸಾರಿಗೆ ಬಸ್ಸುಗಳನ್ನೇ ನೆಚ್ಚಿಕೊಂಡಿದ್ದವರಿಗೆ ಈ ಮುಷ್ಕರದಿಂದ ತುಂಬಾ ತೊಂದರೆಯಾಯಿತು. ಅದರಲ್ಲೂ ದಿನಸಿ ಪದಾರ್ಥಗಳ ಪೂರೈಕೆ ಸ್ಥಗಿತಗೊಂಡು ಜನಸಾಮಾನ್ಯರಿಗೆ ಸಮಸ್ಯೆ ಉಂಟಾಯಿತು. ಡೀಸೆಲ್ ಹಾಗೂ ಪೆಟ್ರೋಲ್ ಟ್ಯಾಂಕ್‌ಗಳೂ ಮುಷ್ಕರದಲ್ಲಿ ಪಾಲ್ಗೊಂಡಿರುವುದರಿಂದ ಅಲ್ಲಲ್ಲಿ ಇಂಧನದ ಪೂರೈಕೆಯಲ್ಲಿ ಕೊರತೆ ಕಂಡು ಬಂದಿದೆ ಎಂದು ಈ ಸುದ್ದಿಮೂಲಗಳು ತಿಳಿಸಿವೆ.
ವೇಗ ನಿಯಂತ್ರಕ ಅಳವಡಿಸುವ ಕ್ರಮವನ್ನಿನ್ನೂ ಹೊರ ರಾಜ್ಯಗಳಲ್ಲಿ ಜಾರಿಗೆ ತರಲಾಗಿಲ್ಲ. ಸದರಿ ವೇಗ ನಿಯಂತ್ರಕಗಳನ್ನು ಅಳವಡಿಸುವುದರಿಂದ ಹಣ್ಣು, ತರಕಾರಿ, ಮೀನು ಇವೇ ಮೊದಲಾದ ವಸ್ತುಗಳನ್ನು ಗ್ರಾಹಕರಿಗೆ ಶೀಘ್ರವಾಗಿ ತಲುಪಿಸಲು ಸಾಧ್ಯವಾಗದೆ ಪದಾರ್ಥಗಳು ಹಾಳಾಗಿ ಕೃತಕ ಕೊರತೆ ಉಂಟಾಗುತ್ತದೆ ಹಾಗೂ ಇದು ಬೆಲೆ ಏರಿಕೆಗೆ ಕಾರಣವಾಗುತ್ತದೆ. ಇದರ ಪರಿಣಾಮ ಒಟ್ಟಾರೆಯಾಗಿ ಆಗುವುದು ಗ್ರಾಹಕನ ಮೇಲೆಯೇ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಈ ನಿರ್ಧಾರವನ್ನು ಪರೀಶೀಲಿಸಬೇಕು ಎಂದು ಸಾರಿಗೆ ವಲಯದ ಪ್ರಮುಖರೊಬ್ಬರು ಮುಷ್ಕರದ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
|