ಕೇಂದ್ರ ಸರ್ಕಾರದ ನೀತಿ ಹಾಗೂ ರಾಜ್ಯ ಸಮ್ಮಿಶ್ರ ಸರ್ಕಾರದ ಅವಧಿಯ ಬಜೆಟ್ಟಿನಲ್ಲಿ ಮಂಡಿಸಿರುವ ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ರಾಜ್ಯಪಾಲರು ಅನುದಾನ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಸೋಮವಾರದಂದು ನಗರದಲ್ಲಿ ಪ್ರತಿಭಟನೆ ನಡೆಸಿತು.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರನ್ನು ನಿರ್ಲಕ್ಷಿಸಿರುವ ಕುರಿತು, ನಂಜುಂಡಪ್ಪ ವರದಿಯ ಅನುಷ್ಠಾನ, ಗಡಿನಾಡು ಕನ್ನಡಿಗರ ನಿರ್ಲಕ್ಷ್ಯ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಈ ಪ್ರತಿಭಟನೆಯನ್ನು ಪಕ್ಷವು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ಜನರಿಗೆ ಅನುಕೂಲವಾಗುವಂತಹ ಹಲವು ಕಾರ್ಯಕ್ರಮಗಳನ್ನು ಸಮ್ಮಿಶ್ರ ಸರ್ಕಾರದ ಬಜೆಟ್ಟಿನಲ್ಲಿ ಮಂಡಿಸಲಾಗಿತ್ತು. ಆದರೆ ಅದನ್ನು ಇದುವರೆಗೂ ಅನುಷ್ಠಾನಕ್ಕೆ ತಂದಿಲ್ಲ. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಮಾಡಿದೆ. ತಮ್ಮ ಈ ಎಲ್ಲಾ ಬೇಡಿಕೆಗಳಿಗೆ ಒಂದು ವಾರದಲ್ಲಿ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆಯನ್ನು ನಡೆಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಸದ ಅನಂತಕುಮಾರ್ ಮಾತನಾಡಿ, ಕಾಂಗ್ರೆಸ್ ಚುನಾವಣೆಗೆ ಇನ್ನೂ ಸಿದ್ದವಾಗಿಲ್ಲ. ಮತದಾರರ ಪಟ್ಟಿ ಹಿಡಿದುಕೊಂಡು ಚುನಾವಣೆಯನ್ನು ಮುಂದೂಡುವ ಹುನ್ನಾರ ನಡೆಸುತ್ತಿದೆ ಎಂದು ಟೀಕಿಸಿದರು.
|