ವೇಗ ನಿಯಂತ್ರಕ ಅಳವಡಿಕೆ ವಿರೋಧಿಸಿ ಲಾರಿ, ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಸೇರಿದಂತೆ ಹಲವು ಸಂಘಟನೆಗಳ ಮುಷ್ಕರ ಮಂಗಳವಾರ ಎರಡನೇ ದಿನಕ್ಕೆ ಕಾಲಿರಿಸಿದ್ದು, ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ.
ಸರಕಾರದ ಜೊತೆ ನಡೆಸಿರುವ ಮೊದಲ ಸುತ್ತಿನ ಸಂಧಾನ ಪ್ರಯತ್ನ ವಿಫಲವಾಗಿದ್ದು, ಮಂಗಳವಾರ ಎರಡನೇ ಸುತ್ತಿನ ಮಾತುಕತೆಗೆ ಲಾರಿ ಮಾಲೀಕರ ಒಕ್ಕೂಟವು ಸಜ್ಜಾಗಿದೆ. ಸೋಮವಾರದ ಮಾತುಕತೆ ವಿಫಲವಾದ ಬೆನ್ನಲ್ಲಿ ಮುಷ್ಕರ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯನ್ನು ಸ್ಥಗಿತಗೊಳಿಸುವುದಾಗಿ ಮುಷ್ಕರ ನಿರತ ಲಾರಿ ಮಾಲೀಕರ ಸಂಘವು ಎಚ್ಚರಿಕೆ ನೀಡಿದೆ. ಇದರ ಪರಿಣಾಮವಾಗಿ ತರಕಾರಿ ಹಾಗೂ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ.
ಬೆಂಗಳೂರಲ್ಲಿ ಮುಷ್ಕರದ ಪರಿಣಾಮ ತೀವ್ರವಾಗಿದ್ದರೆ, ಹುಬ್ಬಳ್ಳಿ, ಚಿಕ್ಕಮಗಳೂರು, ತುಮಕೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿಯೂ ಮುಷ್ಕರವು ಯಶಸ್ವಿಯಾಗಿ ನಡೆಯಿತು. ಹುಬ್ಬಳ್ಳಿಯಲ್ಲಿ ಸಾರಿಗೆ ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.
ದ. ಕ.: ತಟ್ಟದ ಬಿಸಿ ಲಾರಿ ಮುಷ್ಕರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದ್ದರೂ, ದಕ್ಷಿಣ ಕನ್ನಡದಲ್ಲಿ ಅಷ್ಟೇನೂ ಪರಿಣಾಮ ಬೀರಿಲ್ಲ. ಅಂತಾರಾಜ್ಯ ಬಸ್‌ಗಳು ಮಾತ್ರ ಸ್ಥಗಿತಗೊಂಡಿದ್ದು, ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದವು. ಉಳಿದಂತೆ ಖಾಸಗಿ ಬಸ್‌ಗಳು ಹಾಗೂ ಲಾರಿಗಳು ಎಂದಿನಂತೆ ಯಥಾಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದವು. ಮುಷ್ಕರದ ಬಗ್ಗೆ ಅಧಿಕೃತವಾಗಿ ಸೂಚನೆ ನೀಡದೆ ಇದ್ದುದರಿಂದ ಮುಷ್ಕರವನ್ನು ಕೈಗೊಳ್ಳಲಾಗುವುದಿಲ್ಲ ಎಂದು ದಕ್ಷಿಣ ಕನ್ನಡದ ಲಾರಿ ಮಾಲೀಕರ ಒಕ್ಕೂಟವು ಈ ಬಗ್ಗೆ ಸ್ಪಷ್ಟನೆ ನೀಡಿದೆ.
|