ಒಂದು ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ದೆಹಲಿಗೆ ತೆರಳಿದ್ದು, ಕಾಂಗ್ರೆಸ್ ಪಕ್ಷದ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಎಂ.ಪಿ. ಪ್ರಕಾಶ್ ತಮ್ಮ ಬಣದೊಂದಿಗೆ ಕಾಂಗ್ರೆಸ್ ಸೇರುವುದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ.
ಈ ಹಿಂದೆ ಜೆಡಿಎಸ್‌ನಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದ ರವಿಶಂಕರ್ ಶೆಟ್ಟಿಯವರೂ ಎಂ.ಪಿ.ಪ್ರಕಾಶ್‌ವರೊಟ್ಟಿಗೆ ತೆರಳಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಜ್ಯ ಉಸ್ತುವಾರಿ ಹೊತ್ತಿರುವ ಪೃಥ್ವಿರಾಜ್ ಚೌಹಾಣ್ ಸೇರಿದಂತೆ ಹಲವು ನಾಯಕರ ಜೊತೆ ಪಕ್ಷ ಸೇರ್ಪಡೆಯ ಕುರಿತು ದಿನಾಂಕವನ್ನು ನಿಗದಿಪಡಿಸಲಿದ್ದಾರೆ ಎಂದು ಬೆಂಗಳೂರಿನಲ್ಲಿರುವ ಪ್ರಕಾಶ್‌ರವರ ನಿಕಟವರ್ತಿಗಳು ತಿಳಿಸಿದ್ದಾರೆ.
ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಜೊತೆ ಮೊದಲ ಸುತ್ತಿನ ಮಾತುಕತೆ ನಡೆಸಿದ್ದು, ತಮಗೆ ಹಾಗೂ ತಮ್ಮ ಬಣದ 14 ಶಾಸಕರಿಗೆ ಟಿಕೆಟ್ ಸಿಗುವ ಬಗ್ಗೆ ಖಾತರಿ ಮಾಡಿಕೊಂಡ ಬಳಿಕ ಅಂತಿಮ ನಿರ್ಧಾರವನ್ನು ಪ್ರಕಟಿಸುವ ಸಂಭವವಿದೆ ಎಂದು ತಿಳಿದು ಬಂದಿದೆ.
ಜೆಡಿಎಸ್‌ನಿಂದ ಬಂಡಾಯವೆದ್ದ ನಂತರ ತಮ್ಮ ಬೇಡಿಕೆಗಳಿಗೆ ಅಸ್ತು ಎನ್ನುವ ಪಕ್ಷವನ್ನು ಸೇರುವ ನಿಟ್ಟಿನಲ್ಲಿ ಕಳೆದ ಒಂದೂವರೆ ತಿಂಗಳಿಂದ ರಾಜ್ಯದ ಹಲವು ಪಕ್ಷಗಳ ನಾಯಕರೊಂದಿಗೆ ಎಂ.ಪಿ.ಪ್ರಕಾಶ್ ಮಾತುಕತೆ ನಡೆಸಿದ್ದರು. ಬಿಜೆಪಿ ಜೊತೆಗಿನ ಸಂಧಾನ ಯಶಸ್ವಿಯಾಗಿದ್ದರೂ, ತಮ್ಮ ಬಣದ ನಿರ್ಧಾರಕ್ಕೆ ತಲೆಬಾಗಿ ಬಿಜೆಪಿ ಸೇರುವ ನಿರ್ಧಾರವನ್ನು ಕೈಬಿಟ್ಟಿದ್ದು ಹಿಂದಿನ ಮಾತು. ಈಗ ಕಾಂಗ್ರೆಸ್ ಜೊತೆಗಿನ ಮಾತುಕತೆಯ ಬಳಿಕ ಪ್ರಕಾಶ್ ಮುಖದಲ್ಲಿ ಮಂದಹಾಸ ಹೊಮ್ಮಿರುವುದಂತೂ ಸತ್ಯ.
ಎಂ.ಪಿ. ಪ್ರಕಾಶ್ ಪಕ್ಷಕ್ಕೆ ಸೇರಿದರೆ ತಮ್ಮ ಪಕ್ಷ ರಾಜ್ಯದಲ್ಲಿ ಮತ್ತಷ್ಟು ಬಲಿಷ್ಠವಾಗಲು ಸಾಧ್ಯವಾಗಬಹುದು ಎಂಬ ಲೆಕ್ಕಾಚಾರದೊಂದಿಗೆ ಪ್ರಕಾಶ್ ಹಾಗೂ ಇತರ ಮುಖಂಡರಿಗೆ ಮಣೆ ಹಾಕಲು ಕಾಂಗ್ರೆಸ್ ನಿರ್ಧರಿಸಿದೆ. ಈ ಬಗ್ಗೆ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಧ್ಯಸ್ಥಿಕೆಯಲ್ಲಿ ಪ್ರಕಾಶ್‌ರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕಸರತ್ತು ಪ್ರಾರಂಭವಾಗಿತ್ತು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡರು ಪ್ರಕಾಶ್ ಜೊತೆ ಸಂಪರ್ಕದಲ್ಲಿದ್ದಾರೆ. ಈ ಬಗ್ಗೆ ಅಂತಿಮ ನಿರ್ಧಾರ ಒಂದು ವಾರದೊಳಗೆ ಹೊರ ಬೀಳುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
|