ವೇಗ ನಿಯಂತ್ರಕವನ್ನು ಅಳವಡಿಸುವುದಕ್ಕೆ ವಿರೋಧಿಸಿ ಸಾರಿಗೆ ಮತ್ತು ಸರಕು ವಾಹನಗಳ ಮಾಲೀಕರು ನಡೆಸುತ್ತಿರುವ ಮುಷ್ಕರದಿಂದಾಗಿ ನಗರದ ಯಶವಂತಪುರದ ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಬಿಸಿ ತಗುಲಿದೆ. ಒಂದು ಸುತ್ತಿನ ಮಾತುಕತೆ ವಿಫಲಗೊಂಡಿರುವುದರಿಂದ ಯಾವುದೇ ತೀರ್ಮಾನಕ್ಕೆ ಬರದೆ ಆಗಿರುವ ವಿಳಂಬದಿಂದ ಈ ಪರಿಸ್ಥಿತಿ ಏರ್ಪಟ್ಟಿದೆ.
ಈಗಾಗಲೇ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರೊಂದಿಗೆ ವಾಹನಗಳ ಮಾಲೀಕರು ಚರ್ಚೆ ನಡೆಸಿದ್ದು ಬೇಡಿಕೆಗೆ ಸರ್ಕಾರ ಭಾಗಶಃ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ. ಆದರೆ ಲಿಖಿತ ಆದೇಶವನ್ನು ಹೊರಡಿಸಲು ವಾಹನ ಮಾಲೀಕರು ಒತ್ತಾಯಿಸಿರುವುದರಿಂದ ಮತ್ತೊಂದು ಹಂತದ ಚರ್ಚೆ ನಡೆಸಿ ಇಂದು ಸಂಜೆಯ ವೇಳೆಗೆ ತೀರ್ಮಾನ ಹೇಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆಂಬ ಅಂಶ ಹೊರಬಿದ್ದಿದೆ.
ಮುಷ್ಕರ ಹೂಡಿರುವವರು ಹೇಳಿರುವ ಪ್ರಕಾರ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ವೇಗನಿಯಂತ್ರಕಗಳು ಸಿಗುತ್ತಿಲ್ಲ. ಅಲ್ಲದೆ ದೆಹಲಿಯಲ್ಲಿ 3-4 ಸಾವಿರ ರೂಪಾಯಿ ಬೆಲೆಯಿರುವ ವೇಗ ನಿಯಂತ್ರಕಕ್ಕೆ ಇಲ್ಲಿ 15 ಸಾವಿರ ರೂ. ದರವನ್ನು ವಿಧಿಸಲಾಗುತ್ತಿದ್ದು ಈ ಹೊರೆಯನ್ನು ಲಾರಿ ಮಾಲೀಕರು ಹೊರುವುದು ಅಸಾಧ್ಯವಾಗಿದೆ. ಇದನ್ನು ಒಂದು ವೇಳೆ ಅಳವಡಿಸಿಕೊಂಡರೂ ಇಂಧನ ಪರಿಣಾಮಶೀಲತೆಯನ್ನು (ಫ್ಯೂಯೆಲ್ ಎಫಿಶಿಯೆನ್ಸಿ) ಸಾಧಿಸದಂತಾಗಿ ಹೆಚ್ಚು ಕಿ.ಮೀ.ವರೆಗೆ ವಾಹನ ಕ್ರಮಿಸಲು ಆಗುವುದಿಲ್ಲ. ಇದರಿಂದ ಅಪಾರ ಪ್ರಮಾಣದ ನಷ್ಟವುಂಟಾಗುತ್ತದೆ ಎಂಬುದು ವಾಹನ ಮಾಲೀಕರ ಅಭಿಪ್ರಾಯ.
ಈ ಹಿನ್ನೆಲೆಯಲ್ಲಿ ವೇಗ ನಿಯಂತ್ರಕ ಅಳವಡಿಕೆಗಾಗಿ ಕನಿಷ್ಠ 6 ತಿಂಗಳು ಅಥವಾ ಒಂದು ವರ್ಷದವರೆಗೆ ಕಾಲಾವಕಾಶ ಕೊಡಬೇಕು ಎಂದು ಮಾಲೀಕರು ಬೇಡಿಕೆ ಇಟ್ಟಿದ್ದಾರೆ. ಇಂದು ಸಂಜೆಯೊಳಗಾಗಿ ಸರ್ಕಾರದ ವಲಯದಲ್ಲಿ ಇದಕ್ಕೆ ಯಾವ ರೀತಿ ಸ್ಪಂದನೆ ಸಿಗುತ್ತದೆ ಎಂಬುದರ ಮೇಲೆ ನಾಳಿನ ಸರಕು ಸಾಗಣೆ ಪರಿಸ್ಥಿತಿ ಹಾಗೂ ಮಾರುಕಟ್ಟೆ ಪರಿಸ್ಥಿತಿ ನಿಂತಿದೆ.
|