ಇತ್ತೀಚೆಗಷ್ಟೇ ಜೆಡಿಎಸ್ ಪಕ್ಷವನ್ನು ತೊರೆದಿರುವ ಒಕ್ಕಲಿಗರ ನಾಯಕ ಹಾಗೂ ಮಾಜಿ ಸಚಿವ ಬಿ.ಎನ್. ಬಚ್ಚೇಗೌಡರನ್ನು ಮತ್ತೆ ಪಕ್ಷಕ್ಕೆ ಕರೆ ತರುವ ನಿಟ್ಟಿನಲ್ಲಿ ರಾಜ್ಯ ಜೆಡಿಎಸ್ ಕಾರ್ಯಾಧ್ಯಕ್ಷ ನಾರಾಯಣ ಸ್ವಾಮಿ ಮಂಗಳವಾರ ಭೇಟಿ ಮಾಡಿದರು.
ಜೆಡಿಎಸ್ ಬಗ್ಗೆ ಅಸಮಾಧಾನ ತಳೆದಿರುವ ಬಚ್ಚೇಗೌಡರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ ಸ್ವಾಮಿ, ಬಚ್ಚೇಗೌಡರನ್ನು ಪಕ್ಷದಲ್ಲಿ ಉಳಿಯುವಂತೆ ಮನವೊಲಿಸಲಾಗಿದೆ. ಅಲ್ಲದೆ, ಈ ಹಿಂದೆ ಜೆಡಿಎಸ್ ತೊರೆದಿರುವ ನಾಯಕರನ್ನು ಮನವೊಲಿಸುವ ಪ್ರಯತ್ನ ಮುಂದುವರಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಜನತೆಯ ಕಷ್ಟಗಳಿಗೆ ಪಕ್ಷದ ವರಿಷ್ಠರಾದ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ಹೇಳಿಕೊಂಡು ಬಂದಿದ್ದು, ಈ ಮೂಲಕ ಜೆಡಿಎಸ್ ಪಕ್ಷದ ನಾಯಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸುತ್ತಿದೆ. ಆದರೆ ನಾಯಕರು ಜೆಡಿಎಸ್ ತೊರೆದರೂ ಕಾರ್ಯಕರ್ತರು ಇಲ್ಲಿಯೇ ಉಳಿಯತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಬಚ್ಚೇಗೌಡರು ಜೆಡಿಎಸ್ ತೊರೆದ ಬೆನ್ನಲ್ಲೆ ಬಿಜೆಪಿಯ ನಾಯಕರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಆರ್. ಅಶೋಕ್ ಭೇಟಿ ಮಾಡಿ ಪಕ್ಷ ಸೇರುವಂತೆ ಮನವಿ ಮಾಡಿದ್ದರು. ಈ ಬಗ್ಗೆ ಬಚ್ಚೇಗೌಡ ಬಿಜೆಪಿ ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆದರೆ ನಾರಾಯಣ ಸ್ವಾಮಿ ನಡೆಸಿದ ಮಾತುಕತೆ ಯಶಸ್ವಿಯಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿದ್ದು ಮುಂದಿನ ತಂತ್ರಗಳ ಕುರಿತು ಕುತೂಹಲದಿಂದ ಎದುರುನೋಡುವಂತಾಗಿದೆ.
|