ಎರಡು ವರ್ಷಗಳ ಪರ್ಯಾಯದ ಅವಧಿಯಲ್ಲಿ ಪುತ್ತಿಗೆ ಶ್ರೀಗಳು ನಡೆಸುವ ಶ್ರೀಕೃಷ್ಣ ಪೂಜೆಗೆ ಇತರ ಮಠಾಧೀಶರಿಂದ ಬೆಂಬಲ ಸಿಗುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ ಇದಕ್ಕೆ ಉಳಿದ ಮಠಾಧೀಶರು ಒಪ್ಪಿದ್ದಾರೆ ಎಂದು ಪುತ್ತಿಗೆ ಶ್ರೀಗಳು ಹೇಳುವ ಮೂಲಕ ವಿವಾದ ಇತ್ಯರ್ಥವಾಗುವ ಘಟ್ಟಕ್ಕೆ ಬಂದಂತಾಗಿದೆ.
ಈಗಾಗಲೇ ಶಿರೂರು ಶ್ರೀಗಳು ಪುತ್ತಿಗೆ ಶ್ರೀಗಳ ಶ್ರೀಕೃಷ್ಣ ಪೂಜೆಯಲ್ಲಿ ಸಹಕರಿಸುತ್ತಿದ್ದು, ಕಾಣಿಯೂರು ಶ್ರೀಗಳು ಮತ್ತು ಪೇಜಾವರ ಶ್ರೀಗಳೂ ಪೂಜೆಯ ಅವಧಿಯಲ್ಲಿ ಸಹಕರಿಸುವುದರ ಕುರಿತು ಆಶ್ವಾಸನೆ ನೀಡಿರುವುದಾಗಿ ತಿಳಿದುಬಂದಿದೆ.
ಇದಿಷ್ಟೇ ಅಲ್ಲದೆ, ಅಷ್ಟಮಠಗಳ ಸಂವಿಧಾನ ರಚನೆಗೆ ಸಂಬಂಧಿಸಿ ಪುತ್ತಿಗೆ ಶ್ರೀಗಳು ಮಾಡಿರುವ ಪ್ರಸ್ತಾವನೆಗಳಿಗೂ ಉಳಿದೆಲ್ಲ ಮಠಾಧೀಶರ ಅನುಮೋದನೆ ಸಿಕ್ಕಿದ್ದು ವಿವಾದದ ಗೂಡಾಗಿದ್ದ ಉಡುಪಿ ಮತ್ತೆ ಎಂದಿನ ದಿನಗಳಿಗೆ ಮರಳುವ ದಿನಗಳು ದೂರವಿಲ್ಲ ಎಂದೇ ಅರ್ಥೈಸಲಾಗುತ್ತಿದೆ.
ಆದರೆ ಪರ್ಯಾಯ ಮಹೋತ್ಸವ ಮುಗಿದು ಇಷ್ಟು ದಿನಗಳಾದ ಬಳಿಕವೂ ಪುತ್ತಿಗೆ ಶ್ರೀಗಳು ಶ್ರೀಕೃಷ್ಣನ ವಿಗ್ರಹವನ್ನು ಮುಟ್ಟದೇ ಪೂಜಿಸುತ್ತಿದ್ದಾರೆ ಎಂದು ತಿಳಿದುಬಂದಿದ್ದು ಈ ಕುರಿತು ಅವರಿಂದ ಯಾವುದೇ ಸಮರ್ಥನೆ ಅಥವಾ ವಿವರಣೆಗಳು ಹೊರಬಿದ್ದಿಲ್ಲ. ಆದರೆ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ತಾವು ಹಾಕಿಕೊಂಡಿರುವ ಯೋಜನೆಗಳನ್ನು ಕಾರ್ಯಗತಗೊಳಿಸಲು ಅನುವಾಗುವಂತೆ ಈಗಾಗಲೇ ವಿದೇಶದ ಎನ್‌ಜಿಒಗಳೊಂದಿಗೆ ಪುತ್ತಿಗೆ ಶ್ರೀಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.
|