ಹಲವು ಸಮಸ್ಯೆಗಳನ್ನು ಹುಟ್ಟು ಹಾಕಿದ್ದ ಫಟಾಫಟ್ ಅಂಡರ್ಪಾಸ್ ನಿರ್ಮಾಣದ ಸ್ಥಳದಲ್ಲಿ ಅಂತರ್ಜಲ ಕಂಡುಬಂದಿದ್ದು ಕಾಮಗಾರಿಗೆ ಈಗ ಮತ್ತೊಂದು ತಡೆಯುಂಟಾಗಿದೆ.ಅಂಡರ್ಪಾಸ್ ನಿರ್ಮಾಣದಿಂದ ಆಗಿರುವ ತೊಂದರೆಯಿಂದ ಸಾರ್ವಜನಿಕರಲ್ಲಿ ಎದ್ದಿರುವ ಅಸಮಾಧಾನದ ಬೆಂಕಿಗೆ ಇದು ತುಪ್ಪ ಸುರಿದಂತಾಗಿದೆ.
ಸಮುದ್ರ ತಳದಿಂದ ತೈಲ ತೆಗೆಯುವಾಗ ಬಳಸುವಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಕಾಮಗಾರಿಯಲ್ಲಿ ಬಳಸಿದರೆ ನೀರಿನ ಮಧ್ಯದಲ್ಲಿಯೂ ಕಾಮಗಾರಿ ನಡೆಸಬಹುದು; ಸಮಸ್ಯೆಯೇ ಇರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸ್ಥಳೀಯರು, ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ವ ಯೋಜನೆಯಿಲ್ಲದ ದಿಢೀರ್ ಅಂಡರ್ ಪಾಸ್‌ಗೆ ಈಗಾಗಲೇ ನಾನಾ ರೀತಿಯ ವಿಘ್ನಗಳು ಕಂಡು ಬಂದಿವೆ. ಬ್ರಿಟಿಷ್ ಕಾಲದ ನೀರಿನ ಪೈಪು ಒಡೆದು ಕಾಮಗಾರಿಗೆ ಅಡ್ಡಿಯಾಯಿತು. ಬಳಿಕ ಅದನ್ನು ಸರಿಪಡಿಸಿದರೂ ಮಣ್ಣು ಕುಸಿತ ಪ್ರಾರಂಭವಾಗಿ ಮತ್ತೆ ಕಾಮಗಾರಿಗೆ ಆಡಚಣೆಯಾಯಿತು. ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳುವ ಹೊತ್ತಿನಲ್ಲಿ ಅಂತರ್ಜಲ ಕಂಡು ಬಂದಿರುವುದು ಮತ್ತೊಂದು ಸಮಸ್ಯೆಯನ್ನು ಹುಟ್ಟು ಹಾಕಿದಂತಾಗಿದೆ.
ಬಿಬಿಎಂಪಿ ಆಯುಕ್ತರಾದ ಡಾ. ಎಸ್. ಸುಬ್ರಮಣ್ಯರವರು ಮೊನ್ನೆ ರಾತ್ರಿಯೆಲ್ಲಾ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಆದರೂ ಕಾಮಗಾರಿ ಮಾತ್ರ ಯಶಸ್ಸಾಗಿಲ್ಲ. ಸಮಸ್ಯೆಗಳ ಸರಮಾಲೆಯೇ ಬಿಬಿಎಂಪಿ ಎದುರು ನಿಂತಿದೆ. ಆದರೆ ಇದಕ್ಕೆ ತಕ್ಕುದಾದ ಪರಿಹಾರ ಕಂಡುಕೊಳ್ಳುವಲ್ಲಿ ಅದಕ್ಕಿನ್ನೂ ಸಾಧ್ಯವಾಗಿಲ್ಲ. ಸೂಕ್ತವಾದ ಪರಿಹಾರ ಕಂಡುಕೊಂಡು ಕ್ಷಿಪ್ರ ಸಮಯದಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡುವುದು ಈಗ ಬಿಬಿಎಂಪಿ ಎದುರು ಇರುವ ಬಹುದೊಡ್ಡ ಸವಾಲಾಗಿದೆ.
|