ಕರ್ನಾಟಕದಲ್ಲಿ ನಾನು ಹುಟ್ಟಬಾರದದಿತ್ತು ಎಂದು ಹೇಳುವ ಮೂಲಕ ದೇವೇಗೌಡರು ವಿನಾಕಾರಣ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಪತ್ರಿಕಾವಲಯ, ರಾಜಕೀಯ ವಲಯವೂ ಸೇರಿದಂತೆ ಜನಸಾಮಾನ್ಯರೂ ಗೌಡರ ಈ ಮಾತಿಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಾಳೆ ನಡೆಯಲಿರುವ ಜೆಡಿಎಸ್ ಸಮಾವೇಶ ಮಹತ್ವದ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ.
ಮುಂಬರಲಿರುವ ಚುನಾವಣೆಗೆ ಪೂರ್ವಭಾವಿಯಾಗಿ ಪಕ್ಷ ಸಂಘಟನೆ, ಪ್ರತಿಪಕ್ಷಗಳಿಗೆ ನೀಡಬೇಕಿರುವ ಪ್ರತ್ಯುತ್ತರಗಳಿಗೆ ಸಂಬಂಧಿಸಿದ ಬಲಪ್ರದರ್ಶನವಾಗಿ ಈ ಕಾರ್ಯಕರ್ತರ ಸಮಾವೇಶ ಹೊರ ಹೊಮ್ಮಲಿದೆ.
ರಾಷ್ಟ್ತ್ರಮಟ್ಟದ ರಾಜಕೀಯದಲ್ಲಿ ಮಿಂಚುವ ಎಲ್ಲ ಅರ್ಹತೆ-ಸಾಮರ್ಥ್ಯಗಳಿದ್ದರೂ ತೀರಾ ವಿಕ್ಷಿಪ್ತವೆನಿಸುವ ರೀತಿಯಲ್ಲಿ ಮಾತನಾಡುವ, ಕ್ಷುಲ್ಲಕ ರಾಜಕೀಯವನ್ನು ಮಾಡುವ ಗೌಡರ ನಡವಳಿಕೆಯ ಬಗ್ಗೆ ಕ್ಷಣ ಕ್ಷಣಕ್ಕೂ ಜನಮಾನಸದಲ್ಲಿ ಹೇವರಿಕೆ ಉಂಟಾಗುತ್ತಿರುವ ಸನ್ನಿವೇಶದಲ್ಲಿ ಗೌಡರು ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ? ಅನುಕಂಪ ಗಿಟ್ಟಿಸಲು ಯಾವ ರೀತಿಯ ನಾಟಕವನ್ನು ನಾಳಿನ ಸಮಾವೇಶದಲ್ಲಿ ಪ್ರದರ್ಶಿಸಲಿದ್ದಾರೆ ಎಂಬುದು ಕುತೂಹಲದ ಸಂಗತಿಯಾಗಿದೆ.
ಗೌಡರ ರಾಜಕೀಯ ಎದುರಾಳಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರೂ ಸೇರಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣವೂ ಗೌಡರ ವಿರುದ್ಧ ಅಸಮಾಧಾನವನ್ನು ತೋರ್ಪಡಿಸಿಕೊಂಡಿದ್ದು, ಪ್ರಾಯಶಃ ನಾಳಿನ ಸಮಾವೇಶದಲ್ಲಿ ಗೊಂದಲಗಳು ಉಂಟಾಗುವ ಸಾಧ್ಯತೆಗಳಿವೆ.
ಈಗಾಗಲೇ ಮಾತಿಗೆ ತಪ್ಪಿದ ಪಕ್ಷ ಎಂಬ ಭಾವನೆ ಜನರಲ್ಲಿ ಮೂಡಿದೆ. ಗೌಡರು ಇದೇ ರೀತಿ ಹೇಳಿಕೆಗಳನ್ನು ನೀಡುತ್ತಿದ್ದರೆ ಮುಂಬರುವ ಚುನಾವಣೆಗಳಲ್ಲಿ ಜನರ ಮುಂದೆ ಹೋಗಿ ನಿಲ್ಲುವುದು ಕಷ್ಟ ಎಂಬ ಅಭಿಪ್ರಾಯಗಳನ್ನು ನಾಳಿನ ಸಮಾವೇಶದಲ್ಲಿ ಕಾರ್ಯಕರ್ತರು ಮಂಡಿಸಲಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.
|