ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರು ಮಾರ್ಚ್ 28ರಂದು ಉದ್ಘಾಟಿಸಲಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ. ಇತ್ತೀಚೆಗೆ ಪ್ರಧಾನಿಯವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ರಾಜ್ಯಪಾಲರು ಇದಕ್ಕೆ ಸಂಬಂಧಿಸಿ ನೀಡಿದ ಆಹ್ವಾನವನ್ನು ಪ್ರಧಾನಿಯವರು ಸ್ವೀಕರಿಸಿದ್ದಾರೆ ಎಂದು ಈ ಮೂಲಗಳು ತಿಳಿಸಿವೆ.
ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ನಿರ್ಮಿಸಲು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ನಗರದ ಗಾಲ್ಫ್ ಕೋರ್ಟ್ ಪಕ್ಕದ ರಸ್ತೆಯೂ ಸೇರಿದಂತೆ ಸಂಬಂಧಿತ ಇತರ ರಸ್ತೆಗಳ ಅಗಲೀಕರಣ ಹಾಗೂ ಅಡೆ ತಡೆ ನಿವಾರಣೆ ಕಾರ್ಯಗಳು ಈಗಾಗಲೇ ಭರದಿಂದ ಸಾಗುತ್ತಿವೆ.
ವಿಮಾನ ನಿಲ್ದಾಣದ ಬಳಿಗೆ ಭಾರಿ ವೇಗದ ರೈಲು ಸಂಪರ್ಕ ಕಲ್ಪಿಸುವ ಕುರಿತಾಗಿ ಯೋಜನೆಗಳು ಈಗಾಗಲೇ ಸಿದ್ದಗೊಂಡಿದ್ದು, ದೆಹಲಿ ಮೆಟ್ರೋಗೆ ಸದರಿ ರೈಲು ಮಾರ್ಗದ ಅನುಷ್ಠಾನದ ಉಸ್ತುವಾರಿ ಸಿಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿವೆ.
|