ಕರ್ನಾಟಕದಲ್ಲಿ ಚುನಾವಣೆಗಳು ಸಮೀಪಿಸುತ್ತಿರುವಂತೆಯೇ ರಾಜಕೀಯ ವಲಯದಲ್ಲಿ ಪಕ್ಷದಿಂದ ಪಕ್ಷಕ್ಕೆ ಹಾರುವ ಪ್ರಕ್ರಿಯೆ ಬಿರುಸುಗೊಂಡಿದ್ದು, ಹೊಸ ವದಂತಿ ಪ್ರಕಾರ ಮಾಜಿ ಮುಖ್ಯಮಂತ್ರಿ, ಹಲವು ಪಕ್ಷಗಳ ಸರದಾರ ಎಸ್.ಬಂಗಾರಪ್ಪ ಕಾಂಗ್ರೆಸಿಗೆ ಮರಳುತ್ತಾರೆ!
ಈ ವದಂತಿಯು ಕೆಲವರಿಗೆ ರೋಮಾಂಚನ ಹುಟ್ಟಿಸಿದ್ದರೆ, ಮತ್ತೆ ಕೆಲವರಿಗೆ ಭಯವನ್ನೂ ಇನ್ನೂ ಕೆಲವರಿಗೆ ಆಶ್ಚರ್ಯವನ್ನೂ ಉಂಟು ಮಾಡಿದೆ.
ಡಿಸೆಂಬರ್ ಅಂತ್ಯದವರೆಗೂ ಕಾಂಗ್ರೆಸ್ ವಿರುದ್ಧ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ದಾಳಿ ನಡೆಸುತ್ತಲೇ ಇದ್ದ ಬಂಗಾರಪ್ಪ, ಹೊಸ ವರ್ಷದಿಂದೀಚೆಗೆ ಅಂತಹ ಯಾವುದೇ ಹೇಳಿಕೆಗಳನ್ನು ನೀಡದಿರುವುದನ್ನು ನೋಡಿದರೆ ಈ ಮಾತು ನಿಜವಿರಲೂಬಹುದು ಎಂಬ ಅಭಿಪ್ರಾಯಗಳು ರಾಜಕೀಯದ ಕಾರಿಡಾರಿನಲ್ಲಿ ಕೇಳಿಬರುತ್ತಿದೆ.
ಈ ಅಭಿಪ್ರಾಯಗಳಿಗೆ ಪುಷ್ಟಿ ನೀಡುವಂತೆ, ಬಂಗಾರಪ್ಪನವರು ಕಾಂಗ್ರೆಸಿಗೆ ಮರಳಬೇಕು ಎಂದು ಸಾರ್ವಜನಿಕ ವೇದಿಕೆಯೊಂದರಲ್ಲಿ ಹೇಳಿದ್ದನ್ನೇ ನಿನ್ನೆ ರಾತ್ರಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾಜಿ ಸಚಿವ ಎಚ್.ವಿಶ್ವನಾಥ್ ಪುನರುಚ್ಚರಿಸಿದ್ದು ಹಾಗೂ ತಮ್ಮ ಈ ಹೇಳಿಕೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿರುವ ಕುರಿತು ಒಪ್ಪಿಕೊಂಡಿರುವುದು ಈ ಸುದ್ದಿಗಳಿಗೆ ರೆಕ್ಕೆಪುಕ್ಕಗಳನ್ನು ಜೋಡಿಸಿದೆ. ರಾಜ್ಯದ ರಾಜಕಾರಣಕ್ಕೆ ಕೃಷ್ಣರ ಮರು ಪಾದಾರ್ಪಣ ಖಚಿತವಾಗಿದೆ. ಇದು ಕೆಲ ಕಾಂಗ್ರೆಸ್ಸಿಗರಲ್ಲಿ ಒಂದಷ್ಟು ಹುಮ್ಮಸ್ಸು ಮೂಡಿಸಿದೆಯಾದರೂ ಅದಷ್ಟೇ ಸಾಕಾಗುವುದಿಲ್ಲ ಎಂಬ ವಾಸ್ತವತೆಯೂ ಪಕ್ಷಕ್ಕೆ ಗೊತ್ತಿದೆ. ಬಿಜೆಪಿ, ಬಿಎಸ್ಪಿ, ಜೆಡಿಎಸ್ ಇವೇ ಮೊದಲಾದ ರಾಜಕೀಯ ಪಕ್ಷಗಳು ತಮ್ಮ ಸಾಂಪ್ರದಾಯಿಕ ವೋಟ್ ಬ್ಯಾಂಕನ್ನು ಹೊರತುಪಡಿಸಿ ಹಿಂದುಳಿದ ವರ್ಗದವರ, ಅಲ್ಪ ಸಂಖ್ಯಾತರ ಒಲವು ಗಳಿಸಲು ವಿವಿಧ ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ. ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರ ಬೆಂಬಲ ಕಾಂಗ್ರೆಸ್ಸಿಗೆ ಮೊದಲಿನಿಂದ ಇದೆಯಾದರೂ ಅದು ಮೊದಲಿನಷ್ಟು ಪ್ರಮಾಣದಲ್ಲಿ ಇಲ್ಲ. ಉಳಿದ ರಾಜಕೀಯ ಪಕ್ಷಗಳೆಡೆಗೆ ಅದು ಹಂಚಿಹೋಗಿದೆ. ಈ ಹಿನ್ನೆಲೆಯಲ್ಲಿ ಈ ವರ್ಗಗಳ ಡಾರ್ಲಿಂಗ್ ಆಗಿರುವ ಬಂಗಾರಪ್ಪನವರನ್ನು ಪಕ್ಷಕ್ಕೆ ಸೆಳೆದುಕೊಂಡರೆ ಬರಲಿರುವ ಚುನಾವಣೆಗೆ ಅದು ಪೂರಕವಾದೀತು ಎಂಬ ಚಿಂತನೆಗಳಿಗೆ ಈಗ ಪುಷ್ಟಿ ಸಿಕ್ಕಿದೆ.
ರಾಜಕೀಯದಲ್ಲಿ ಯಾರೂ ಶತ್ರುಗಳೂ ಅಲ್ಲ ಮಿತ್ರರೂ ಅಲ್ಲ ಎಂಬ ಸಾರ್ವಕಾಲಿಕ ಮಾತು ಕರ್ನಾಟಕದ ಮಟ್ಟಿಗಂತೂ ಸಾರ್ವಕಾಲಿಕ ನಿಜವಾಗುತ್ತಿದೆ.
|