ಬಿಎಂಐಸಿ ಯೋಜನೆಯಡಿ ನೈಸ್ ಕಂಪೆನಿಯು ನಿರ್ಮಿಸುತ್ತಿರುವ ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡದಿರುವ ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ರಸ್ತೆ ಕಾಮಗಾರಿಗೆ ಅಡ್ಡ ಬಂದಿರುವ ನೀರಿನ ಕೊಳವೆಗಳ ಸ್ಥಳಾಂತರ ಮಾಡಬೇಕೆಂಬ ನೈಸ್ ಕಂಪೆನಿಯ ಮನವಿಗೆ ಜಲಮಂಡಳಿ ಸೂಕ್ತವಾದ ಸಹಕಾರವನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾ| ಆನಂದ್ ಬೈರಾರೆಡ್ಡಿಯವರು ಜಲಮಂಡಳಿಯ ಈ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿ, ನಗರದ ಇತಿಹಾಸದಲ್ಲೇ ಉತ್ತಮವಾದ ರಸ್ತೆ ನಿರ್ಮಾಣವಾಗುವ ಈ ಕಾಮಗಾರಿಗೆ ಏಕೆ ಅವಕಾಶ ಮಾಡಿಕೊಡಬಾರದು ಎಂದು ಪ್ರಶ್ನಿಸಿದ್ದಾರೆ.
ಕೆಂಗೇರಿ ಉತ್ತರಹಳ್ಳಿ ಮಾರ್ಗದಲ್ಲಿ ಬರುವ ಚನ್ನಸಂದ್ರ, ರಿಂಗ್ ರಸ್ತೆ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ನಡೆಸುತ್ತಿರುವ ರಸ್ತೆ ನಿರ್ಮಾಣದಲ್ಲಿ ನೀರಿನ ಕೊಳವೆಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಜಲಮಂಡಳಿ ಅಸಹಕಾರದಿಂದ ಕಾಮಗಾರಿ ವಿಳಂಬವಾಗಿದೆ ಎಂದು ಸದರಿ ಅರ್ಜಿಯಲ್ಲಿ ಆರೋಪಿಸಲಾಗಿದೆ.
ಅರ್ಜಿಯನ್ನು ಪರೀಶೀಲಿಸಿದ ನ್ಯಾಯಾಧೀಶರು, ಕೊಳವೆ ಅಳವಡಿಕೆಯಿಂದ ಉಂಟಾಗುವ ಸಮಸ್ಯೆಗೆ ಪರ್ಯಾಯ ಮಾರ್ಗೋಪಾಯಗಳನ್ನು ಸೂಚಿಸುವಂತೆ ನೈಸ್ ಕಂಪೆನಿಗೆ ಆದೇಶ ನೀಡಿದ್ದಾರೆ.
|