ಉಳ್ಳಾಲದಲ್ಲಿ ನಡೆಯುತ್ತಿರುವ ಗುಂಪು ಗಲಭೆ ತೀವ್ರಗೊಂಡಿರುವ ಪರಿಣಾಮವಾಗಿ 40 ಜನರನ್ನು ಬಂಧಿಸಲಾಗಿದ್ದು, ಉಲ್ಲಾಳದಲ್ಲೀಗ ಸ್ವಯಂ ಘೋಷಿತ ಬಂದ್ ಕಂಡುಬಂದಿದೆ.
ಘರ್ಷಣೆಯ ಕಾರಣ ಎರಡು ದಿನಗಳ ಹಿಂದಿದ್ದ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸಹಜ ಸ್ಥಿತಿಗೆ ಬಂದಿತ್ತಾದರೂ, ನಿನ್ನೆ ರಾತ್ರಿ ಒಬ್ಬ ಆಟೋ ಚಾಲಕನ ಮೇಲೆ ಹಲ್ಲೆ ನಡೆದ ಪರಿಣಾಮವಾಗಿ ಪರಿಸ್ಥಿತಿ ಉದ್ರಿಕ್ತಗೊಂಡಿದೆ.
ಈ ಗುಂಪು ಘರ್ಷಣೆಯಲ್ಲಿ ಅಮಾಯಕರನ್ನು ಬಂಧಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಉಳ್ಳಾಲದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದೆ. ಈಗಾಗಲೇ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಇದರಿಂದ ಸಾರ್ವಜನಿಕರು ಅಗತ್ಯ ವಸ್ತುಗಳಿಗೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕ್ಷುಲಕ ಕಾರಣವು ತೀವ್ರ ಸ್ವರೂಪವನ್ನು ಪಡೆದುಕೊಂಡ ಪರಿಣಾಮ ಸ್ಥಳದಲ್ಲಿ ಸುಮಾರು 500 ಪೊಲೀಸರನ್ನು ನೇಮಿಸಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಪರಿಸ್ಥಿತಿ ಈಗ ಸಹಜ ಸ್ಥಿತಿಯತ್ತ ಮರಳಿದ್ದರೂ, ಶುಕ್ರವಾರ ರಾತ್ರಿಯವರೆಗೆ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ ಎಂದು ತಿಳಿದು ಬಂದಿದೆ.
|