ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಸಹವರ್ತಿ ಬ್ಯಾಂಕುಗಳನ್ನು ವೀಲೀನಗೊಳಿಸುವ ನಿರ್ಧಾರವೂ ಸೇರಿದಂತೆ ತಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಅಧಿಕಾರಿಗಳ ಮತ್ತು ನೌಕರರ ಸಂಘ ಇಂದು ಮುಷ್ಕರ ನಡೆಸುತ್ತಿದೆ.
ರಾಷ್ಟ್ರೀಕೃತ ಬ್ಯಾಂಕುಗಳ ಈ ಮುಷ್ಕರದಲ್ಲಿ ಕೆಲವೊಂದು ಖಾಸಗಿ ಬ್ಯಾಂಕುಗಳೂ ಸೇರಿಕೊಂಡಿವೆಯಾದ್ದರಿಂದ ಇಂದು (ಶುಕ್ರವಾರ) ಬ್ಯಾಂಕುಗಳ ಕಾರ್ಯನಿರ್ವಹಣೆಯಿರದೇ ದೈನಂದಿನ ವ್ಯವಹಾರಗಳಿಗಾಗಿ ಬ್ಯಾಂಕುಗಳನ್ನು ಅವಲಂಬಿಸಿರುವವರಿಗೆ ಕೊಂಚ ತೊಂದರೆಯುಂಟಾಗಲಿದೆ.
ಇಂದಿನ ಮುಷ್ಕರಕ್ಕೆ ತನ್ನ ಬೆಂಬಲವಿಲ್ಲ ಎಂದು ಆಲ್ ಇಂಡಿಯಾ ಬ್ಯಾಂಕ್ ಸಬ್ ಎಂಪ್ಲಾಯೀಸ್ ಯೂನಿಯನ್ ಸ್ಪಷ್ಟಪಡಿಸಿದೆ. ಆದರೆ ಫೆಬ್ರವರಿ 26 ಮತ್ತು ಮಾರ್ಚ್ ಅಂತ್ಯದ ವೇಳೆಗೆ ಮುಷ್ಕರ ಮತ್ತೊಮ್ಮೆ ನಡೆಯಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಅಧಿಕಾರಿಗಳ ಮತ್ತು ನೌಕರರ ಸಂಘ ಈಗಾಗಲೇ ತಿಳಿಸಿದೆ.
ರಾಷ್ಟ್ರೀಕೃತ ಬ್ಯಾಂಕುಗಳು ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ವಿಲೀನ ಪ್ರಕ್ರಿಯೆ ನಡೆದರೆ ನಿರುದ್ಯೋಗ ಸಮಸ್ಯೆ ಉದ್ಭವವಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಸಂಘ, ಅಧಿಕಾರಿಗಳು ಮತ್ತು ನೌಕರರ ಹೊಸ ನೇಮಕಾತಿ, ವೇತನ ಪರಿಷ್ಕರಣೆ ಇವೇ ಮೊದಲಾದ ಕಾರ್ಯಗಳು ಆಗಬೇಕಿರುವುದು ಸದ್ಯದ ಅಗತ್ಯ ಎಂದು ತಿಳಿಸಿದೆ.
|