ರಾಜ್ಯದ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ನಗರ ಪೌರಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮತ್ತು ಬೆಂಗಳೂರು ಸೇರಿದಂತೆ ಎಂಟು ಮಹಾನಗರ ಪಾಲಿಕೆಗಳ ಮೇಯರ್, ಉಪಮೇಯರ್ ಹುದ್ದೆಗಳ ಮೀಸಲು ಪಟ್ಟಿ ನನೆಗುದಿಗೆ ಬಿದ್ದಿತ್ತು. ಈ ಪಟ್ಟಿ ಕೊನೆಗೂ ಪ್ರಕಟಗೊಂಡಿದ್ದು ಈಗ ಈ ಹುದ್ದೆಗಳ ಆಯ್ಕೆಗಾಗಿ ಸದ್ಯದಲ್ಲಿಯೇ ರಾಜಕೀಯ ಕಸರತ್ತುಗಳು ನಡೆಯಲಿವೆ.
ಈ ಹುದ್ದೆಗಳಿಗೆ ಸೆಣೆಸಲು ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಸೆಣೆಸಲಿವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಏಕೆಂದರೆ ಸದ್ಯದಲ್ಲಿಯೇ ರಾಜ್ಯ ವಿಧಾನಸಭಾ ಚುನಾವಣೆಗಳು ನಡೆಯಲಿರುವುದರಿಂದ ಸ್ಥಳೀಯ ಸಂಸ್ಥೆಗಳಲ್ಲಿನ ಪ್ರಮುಖ ಹುದ್ದೆಗಳಿಗೆ ಸ್ಪರ್ಧಿಸುವುದು ಅಥವಾ ಹೊಂದಾಣಿಕೆ ಮಾಡಿಕೊಳ್ಳುವುದು ಇವುಗಳಲ್ಲಿ ಒಂದನ್ನು ಪಕ್ಷಗಳು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಬೆಂಗಳೂರು, ಮೈಸೂರು, ಮಹಾನಗರ ಪಾಲಿಕೆಗಳಲ್ಲಿ ಮೇಯರ್ ಪಟ್ಟ ಸಾಮಾನ್ಯ ವರ್ಗಕ್ಕೆ ಸಿಗಲಿದೆಯಾದರೆ ಉಪ ಮೇಯರ್ ಹುದ್ದೆ ಕ್ರಮವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ದಕ್ಕಲಿದೆ. ಅಂತೆಯೇ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಹುದ್ದೆಗಳು ಕ್ರಮವಾಗಿ ಸಾಮಾನ್ಯ ಮಹಿಳೆ ಹಾಗೂ ಸಾಮಾನ್ಯ ವರ್ಗಕ್ಕೆ ದಕ್ಕಲಿದೆ.
ಯಾವುದೇ ಒಂದು ಪಕ್ಷವೂ ಸ್ವತಂತ್ರವಾಗಿ ಅಧಿಕಾರ ಚುಕ್ಕಾಣಿ ಹಿಡಿಯುವ ಕಾಲ ಎಂದೋ ದೂರವಾಗಿರುವುದರಿಂದ ಇನ್ನೊಂದು ಪಕ್ಷದ ನೆರವಿನ ಹಸ್ತ ಪಡೆಯುವ ಅನಿವಾರ್ಯತೆ ಎಲ್ಲ ಪಕ್ಷಗಳಲ್ಲೂ ಕಂಡುಬರುತ್ತಿದೆ. ಆದರೆ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಪರಸ್ಪರ ಕತ್ತಿ ಮಸೆಯಬೇಕಾಗಿ ಬರುವ ಹಿನ್ನೆಲೆಯಲ್ಲಿ ಹೊಂದಾಣಿಕೆ ಎಷ್ಟರಮಟ್ಟಿಗೆ ಸಾಧ್ಯ ಎಂಬುದೇ ಸದ್ಯದ ಯಕ್ಷಪ್ರಶ್ನೆಯಾಗಿದ್ದು ರಾಜಕೀಯ ಸನ್ನಿವೇಶವನ್ನು ಅರ್ಧ ಕುತೂಹಲಕಾರಿಯನ್ನಾಗಿಯೂ, ಇನ್ನರ್ಧ ಗೊಂದಲಕಾರಿಯನ್ನಾಗಿಯೂ ಮಾಡಿದೆ ಎಂಬುದು ಕೆಲ ರಾಜಕೀಯ ಪಂಡಿತರ ಅಭಿಪ್ರಾಯ.
|