ಖಾಸಗಿ ಬಸ್ಸೊಂದು ಯಶೋಧಮ್ಮ ಎಂಬ ಉದ್ಯೋಗಸ್ಥ ಮಹಿಳೆಗೆ ಇಂದಿರಾನಗರದಲ್ಲಿ ಡಿಕ್ಕಿ ಹೊಡೆದ ಪರಿಣಾಮವಾಗಿ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದರಿಂದಾಗಿ ಇಂದಿರಾನಗರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಹೊಸಕೋಟೆಯಿಂದ ಬೆಂಗಳೂರಿಗೆ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ಸು ಯಶೋಧಮ್ಮನವರಿಗೆ ಡಿಕ್ಕಿ ಹೊಡೆದ ನಂತರವೂ ನಿಲ್ಲದೆ ಮುಂದೆ ಹೋದಾಗ ಅಲ್ಲಿದ್ದ ಸಾರ್ವಜನಿಕರೇ ಬೆನ್ನಟ್ಟಿ ಅದನ್ನು ನಿಲ್ಲಿಸಿದರು. ನಂತರ ಚಾಲಕನ ವರ್ತನೆಯಿಂದ ರೊಚ್ಚಿಗೆದ್ದ ಜನರು ಬಸ್ಸಿನೆಡೆಗೆ ಕಲ್ಲುತೂರಾಟ ನಡೆಸಿದ್ದಲ್ಲದೆ ಬಸ್ಸಿಗೆ ಬೆಂಕಿ ಹಚ್ಚಿದ್ದಾರೆ.
ಈ ಘಟನೆಯಿಂದ ಇಂದಿರಾನಗರದ ಸುತ್ತಮುತ್ತ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದ್ದು ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಸ್ಥಿತಿಯನ್ನು ಸ್ವಲ್ಪಮಟ್ಟಿಗೆ ತಿಳಿಗೊಳಿಸಿದ್ದಾರೆ. ಶವವನ್ನು ಈಗಾಗಲೇ ಸ್ಥಳದಿಂದ ವರ್ಗಾಯಿಸಲಾಗಿದ್ದು, ಘಟನೆ ನಡೆದ ಬಹಳ ಕಾಲದವರೆಗೆ ಇಂದಿರಾನಗರದ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿತ್ತು.
ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಅತಿವೇಗವಾಗಿ ಬಸ್ ಚಾಲಿಸಿಕೊಂಡುಬಂದ ಚಾಲಕನದೇ ತಪ್ಪಾಗಿದ್ದು ಪೊಲೀಸರು ಅವನನ್ನು ಈಗ ತಮ್ಮ ವಶಕ್ಕೆ ತೆಗೆದುಕೊಂಡು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.
|