ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ, ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ಇವೇ ಮೊದಲಾದವುಗಳು ಸೇರಿದಂತೆ ಕನ್ನಡಿಗರ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಾಡಿದ್ದು 27ರ ಭಾನುವಾರ ರಾಜ್ಯಾದ್ಯಂತ ರೈಲು ಬಂದ್ ಚಳವಳಿಯನ್ನು ನಡೆಸಲು ವಿವಿಧ ಕನ್ನಡ ಪರ ಸಂಘಟನೆಗಳು ತೀರ್ಮಾನಿಸಿವೆ.
ಮಾಜಿ ಶಾಸಕ ಹಾಗೂ ಅಖಿಲ ಕರ್ನಾಟಕ ಗಡಿ ಹೋರಾಟ ಸಮಿತಿಯ ಅಧ್ಯಕ್ಷ ವಾಟಾಳ್ ನಾಗರಾಜ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಕನ್ನಡಿಗರ ಬೇಡಿಕೆಗೆ ಓಗೊಡದ ಕೇಂದ್ರ ಸರ್ಕಾರಕ್ಕೆ ಈ ಮೂಲಕ ಬಿಸಿ ಮುಟ್ಟಿಸುವ ತೀರ್ಮಾನವನ್ನು ಕೈಗೊಳ್ಳಲಾಯಿತು.
ಒಂದು ವೇಳೆ ಈ ರೈಲು ಬಂದ್ ಚಳವಳಿಗೂ ಕೇಂದ್ರ ಸರ್ಕಾರ ಬಗ್ಗದಿದ್ದರೆ ಫೆಬ್ರವರಿ 16ರಂದು ಪ್ರಧಾನಮಂತ್ರಿಯವರ ನಿವಾಸದ ಮುಂದೆ ಧರಣಿ ಹೂಡಲಾಗುವುದು ಎಂದು ಸಭೆಯ ನಂತರ ವಾಟಾಳ್ ನಾಗರಾಜ್ ತಿಳಿಸಿದರು.
ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಬೆಳಗ್ಗೆ ಆರಂಭವಾಗುವ ಮೆರವಣಿಗೆ ರೈಲು ನಿಲ್ದಾಣದಲ್ಲಿ ಸಮಾವೇಶಗೊಂಡ ನಂತರ ರೈಲುಗಳ ಸಂಚಾರವನ್ನು ನಿಲ್ಲಿಸಲಾಗುವುದು. ಈ ಮೆರವಣಿಗೆಯಲ್ಲಿ ಅಸಂಖ್ಯಾತ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
|