ಗಣ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಘೋಷಿಸಲಾದ ಪದ್ಮ ಪ್ರಶಸ್ತಿಗಳಿಗೆ ಭಾಜನರಾದವರಲ್ಲಿ ಕರ್ನಾಟಕದ ಸಾಹಿತ್ಯ-ಔದ್ಯಮಿಕ-ಧಾರ್ಮಿಕ ಕ್ಷೇತ್ರಗಳ ಸಾಧಕರು ಸೇರಿರುವುದು ಕರ್ನಾಟಕಕ್ಕೇ ಹೆಮ್ಮೆ ತಂದಿದೆ.
ಮಾಹಿತಿ ತಂತ್ರಜ್ಞಾನದ ಸಾಧ್ಯತೆಗಳನ್ನು ದೇಶಕ್ಕೆ ತೋರಿಸಿಕೊಟ್ಟಿದ್ದೇ ಅಲ್ಲದೇ ಇಡೀ ವಿಶ್ವದ ದೃಷ್ಟಿ ಭಾರತದೆಡೆಗೆ ತಿರುಗುವಂತೆ ಮಾಡಿದ ಕೀರ್ತಿ ಇನ್ಪೋಸಿಸ್ ನಾರಾಯಣ ಮೂರ್ತಿಯವರದು. ಇವರಿಗೆ ನೀಡಲಾಗಿರುವ ಪದ್ಮವಿಭೂಷಣ ಪ್ರಶಸ್ತಿ ಕನ್ನಡಿಗನ ಸಾಧನೆಗೆ ತೊಡಿಸಿದ ಕೀರೀಟವೆಂದೇ ಹೇಳಬಹುದು.
ನಿತ್ಯೋತ್ಸವದ ಕವಿಯೆಂದೇ ನಾಡಿನಲ್ಲೆಲ್ಲಾ ಬಣ್ಣಿಸಲ್ಪಟ್ಟ ಪ್ರೊ.ಕೆ.ಎಸ್.ನಿಸಾರ್ ಅಹಮದ್‌ರವರದು ಭೂಗರ್ಭ ವಿಜ್ಞಾನಿಯಾಗಿದ್ದೂ ಕನ್ನಡ ಸಾಹಿತ್ಯ ಗರ್ಭದಿಂದ ಮುತ್ತಿನ ಮಣಿಗಳನ್ನು ಹೆಕ್ಕಿ ತೆಗೆದು ಮಾಲೆ ಮಾಡಿ ತಾಯಿ ಭುವನೇಶ್ವರಿಗೆ ಅರ್ಪಿಸಿದ ಅಪ್ಪಟ ಭಾವಹೃದಯ. ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳಿಂದ ಅಲಂಕೃತರಾಗಿದ್ದ ನಿಸಾರರಿಗೆ ಈಗ ಪದ್ಮಶ್ರೀ ಪ್ರಶಸ್ತಿಯ ಪುರಸ್ಕಾರ.
ಮೂಲತಃ ಸಿವಿಲ್ ಎಂಜಿನಿಯರ್ ಆಗಿದ್ದು ಧಾರ್ಮಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಗೌರೀಶಂಕರ್, ಶೃಂಗೇರಿ ಮಠದ ಸೇವೆಯಲ್ಲಿ ಸಲ್ಲಿಸುತ್ತಿರುವ ಸೇವೆ ವರ್ಣನೆಗೆ ನಿಲುಕದ್ದು. ಗುರುಸೇವಾ ಧುರೀಣ ಎಂದು ಸಾಕ್ಷಾತ್ ಶೃಂಗೇರಿ ಸ್ವಾಮಿಗಳಿಂದಲೇ ಬಣ್ಣಿಸಲ್ಪಟ್ಟಿರುವ ಹಾಗೂ ರಾಜ್ಯೋತ್ಸವ ಪ್ರಶಸ್ತಿಯಿಂದ ಗೌರವಿಸಲಪಟ್ಟಿರುವ ಗೌರೀಶಂಕರ್ ಈಗ ಪದ್ಮಶ್ರೀ ಪ್ರಶಸ್ತಿಯಿಂದ ಪುರಸ್ಕ್ಕತರು.
ಕುಂದಾಪುರ ಮೂಲದ ಕೆ.ವಿ.ಕಾಮತ್ ಐಸಿಐಸಿಐ ಬ್ಯಾಂಕನ್ನು ಮುಂಚೂಣಿಗೆ ತರಲು ಅಹರ್ನಿಶಿ ದುಡಿದ ಪ್ರತಿಭೆ. ಎಂಜಿನಿಯರಿಂಗ್ ಪದವಿ, ಎಂಬಿಎ ಪದವಿ ಪಡೆದ ನಂತರ ಏಷ್ಯನ್ ಅಭಿವೃದ್ದಿ ಬ್ಯಾಂಕ್‌ನಲ್ಲಿ ಪ್ರೈವೇಟ್ ಬ್ಯಾಂಕಿಂಗ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, ನಂತರ ಐಸಿಐಸಿಐ ಬ್ಯಾಂಕಿಗೆ ಸೇರಿದವರು ಕೆ.ವಿ.ಕಾಮತ್. ಈಗ ಅದರ ಚೇರ್ಮನ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಮತ್‌ರವರಿಗೆ ಸಂದಿರುವ ಪದ್ಮಭೂಷಣ ಪ್ರಶಸ್ತಿ ಅವರ ಸಾಧನೆಯ ಕೀರೀಟಕ್ಕೆ ಸೇರಿದ ಮತ್ತೊಂದು ಗರಿ. ಇದು ಕನ್ನಡಿಗರೆಲ್ಲರಿಗೂ ಸಂದ ಗೌರವ ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯ.
|