ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅರಮನೆಯ ಅಂಗಳದಲ್ಲಿ ರಂಗುಗಳ ಚೆಲುವಿನ ಚಿತ್ತಾರ
ಎಲ್ಲಿ ನೋಡಿದರಲ್ಲಿ ರಂಗು ರಂಗಿನ ಹೋಳಿ. ಕಾಲಿಟ್ಟು, ಕಣ್ಣು ಹಾಯಿಸಿದೆಡೆಯೆಲ್ಲ ಚೆಲುವಿನ ಚಿತ್ತಾರ. ಸ್ವರ್ಗ ಸದೃಶ ಅಥೆನ್ಸ್ ನಗರವೇ ಉದ್ಯಾನ ನಗರಿಗೆ ಇಳಿಯಿತೋ ಎಂಬ ಭ್ರಮೆ ಮೂಡಿಸುವ ರಂಗೋಲಿಯಾಯಣ.

ಸವಿಯಲು ಎರಡು ಕಣ್ಣುಗಳು ಸಾಲವು, ನಾವೂ ಸಾವಿರ ಕಣ್ಣುಗಳ ನವಿಲಾಗಬಾರದೇ ಎಂಬ ಭಾವ ಮೂಡಿಸುವ ರಂಗೋಲಿಯ ಹೂರಣ, ರಂಗಿನ ತೋರಣ.

ಇದು ಅರಮನೆಯ ಮೈದಾನದಲ್ಲಿ ಕಂಡು ಬಂದ ರಂಗೋಲಿ ಸಂಭ್ರಮದ ಒಂದು ಆಯಾಮವಷ್ಟೇ. ಕಣ್ಣುಗಳು ಸೆರೆಹಿಡಿದಿದ್ದನ್ನು ಕಾಗದದ ಮೇಲೆ ಇಳಿಸುವಾಗ ಬರಹಗಾರ ಕೆಲವೊಮ್ಮೆ ಸೋಲುತ್ತಾನೆ. ಆದ್ದರಿಂದ ಆತ ಸದ್ದಿಲ್ಲದೇ ಸೌಂದರ್ಯ ಆಸ್ವಾದಿಸುವುದು ಒಳಿತು ಎಂದು ಕೆಲವರು ಹೇಳುತ್ತಾರೆ. ಅರಮನೆಯ ಮೈದಾನದಲ್ಲಿ ಕಂಡು ಬಂದ ರಂಗೋಲಿಯ ವೈಭವವನ್ನು ಕಂಡಾಗ ಆಯಾಚಿತವಾಗಿ ಸೋಲನ್ನೊಪ್ಪಿಕೊಳ್ಳಬೇಕಾಗಿ ಬಂತು. ಅದೂ ಒಂದು ರೀತಿಯ ಹೆಮ್ಮೆಯೇ.

ಜಗತ್ತಿನಲ್ಲಿಯೇ ಅತಿ ಉದ್ದನೆಯ ರಂಗೋಲಿ ಬಿಡಿಸಿ ದಾಖಲೆ ನಿರ್ಮಿಸಲು ಹೊರಟಿರುವ ನಗರದ ಸುವರ್ಣ ಜ್ಯೌತಿ ಟ್ರಸ್ಟ್ ಜೊತೆಗೆ ಸುಮಾರು 1 ಸಾವಿರ ಜನ ಕೈಜೋಡಿಸಿರುವ ಫಲವೇ ಈ ಬೃಹತ್ ರಂಗೋಲಿ ಬಿಡಿಸುವ ಯೋಜನೆ. ಒಂದೂವರೆ ಲಕ್ಷ ಚದರಡಿಯಲ್ಲಿ ಹರಡಿಹೋಗಿರುವ ಭವ್ಯ ರಂಗೋಲಿಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಯೋಧರು ಮರುಹುಟ್ಟು ಪಡೆದಿದ್ದಾರೆ, ದೇವತೆಗಳು ಧರೆಗಿಳಿದಿದ್ದಾರೆ.

ಯಾವುದೇ ಜಾತಿ ಬೇಧವಿಲ್ಲದೆ, ವಯಸ್ಸಿನ ಅಂತರವಿಲ್ಲದೇ ರಂಗೋಲಿ ಬಿಡಿಸುವ ಮೂಲಕ ಉತ್ಸಾಹಿಗಳು ಇತಿಹಾಸ ಸೃಷ್ಟಿಸುತ್ತಿರುವ ಪರಿಯನ್ನು ನೋಡಲು ಅಲ್ಲಿಗೇ ಬರಬೇಕು. ಅಂಧಮಕ್ಕಳೂ ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದರೆ ಈ ದೃಶ್ಯ ವೈಭವವನ್ನು ಮಿಸ್ ಮಾಡಿಕೊಳ್ಳುವಂತೆಯೇ ಇಲ್ಲ. ಭಾನುವಾರ ರಾತ್ರಿ 9ರವರೆಗೂ ಈ ರಂಗು ರಂಗಿನ ರಂಗೋಲಿಯನ್ನು ಕಣ್ತುಂಬಿಕೊಳ್ಳಲು ಅವಕಾಶವಿದೆ.
ಮತ್ತಷ್ಟು
ಗಣರಾಜ್ಯೋತ್ಸವದ ಸಡಗರದಲ್ಲಿ ಅಪಸ್ವರ
ರಾಜ್ಯದಲ್ಲಿ ವಿದ್ಯುತ್ ವ್ಯತ್ಯಯ
ಪರ್ಯಾಯ ವಿವಾದವಾಯಿತು; ಈಗ ವಾಸ್ತುದೋಷವೇ?
ಗಣರಾಜ್ಯೋತ್ಸವಕ್ಕೆ ಸಂಭ್ರಮದ ಚಾಲನೆ
ಪದ್ಮ ಪ್ರಶಸ್ತಿ ಭೂಷಿತ ಕನ್ನಡ ಹೃದಯಗಳು
ಬೆಳಗಾವಿಯಲ್ಲಿ ಹಾರುವುದೇ ಕನ್ನಡ ಧ್ವಜ?