ತಾವು ಕಾಂಗ್ರೆಸ್ ಪಕ್ಷ ಸೇರುವುದಾಗಿ ಹೇಳಿರುವ ಮಾಜಿ ಸಚಿವ ಎಚ್.ವಿಶ್ವನಾಥ್‌ರವರಿಗೆ ತಲೆ ಕೆಟ್ಟಿದೆ. ಅವರಂತೆಯೇ ನಾನೂ ಹೇಳುವುದಾದರೆ ಸೋನಿಯಾ ಗಾಂಧಿಯವರು ಸಮಾಜವಾದಿ ಪಕ್ಷ ಸೇರುತ್ತಾರೆ ಎಂದು ಹೇಳಬಹುದು. ಆದರೆ ಅದು ಸಾಧ್ಯವೇ? ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಎಸ್.ಬಂಗಾರಪ್ಪ ಪ್ರಶ್ನಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ತಮಗಿರುವ ಭಾಷಣದ ಚಟವನ್ನು ವಿಶ್ವನಾಥ್ ಇತರೆ ವಿಷಯಗಳಿಗೆ ಬಳಸಿಕೊಳ್ಳಲಿ. ಈ ರೀತಿ ಅವಿವೇಕತನದ ಹೇಳಿಕೆ ನೀಡುವುದು ಬೇಡ ಎಂದು ನುಡಿದರು.
ಇಂದಿರಾಗಾಂಧಿ, ರಾಜೀವ್ಗಾಂಧಿಯವರಿಲ್ಲದೆ ದುರ್ಬಲವಾಗಿರುವ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಸ್ಥಿತಿಯೂ ರಿಪೇರಿಯಾಗದ ಮಟ್ಟಕ್ಕೆ ಹೋಗಿದೆ. ಯಾತ್ರೆಗಳು ಮತ್ತು ಮಾಧ್ಯಮಗಳ ಪ್ರಚಾರದಿಂದ ಈ ಮಟ್ಟ ಮುಟ್ಟಿರುವ ಬಿಜೆಪಿ ಅನುಕಂಪದ ಆಧಾರದ ಮೇಲೆ ಅಧಿಕಾರ ಗಿಟ್ಟಿಸಲಿದೆ ಎಂಬುದು ಸುಳ್ಳು ಎಂದು ಬಂಗಾರಪ್ಪ ನುಡಿದರು.
ರಾಜ್ಯದಲ್ಲೀಗ ಯಾವ ಪಕ್ಷದ ಪರವಾಗಿಯೂ ಗಾಳಿ ಬೀಸುತ್ತಿಲ್ಲ. ಎಲ್ಲ ಪಕ್ಷಗಳದೂ ಅತಂತ್ರ ಸ್ಥಿತಿಯೇ. ನಮ್ಮ ಪಕ್ಷದ ವೇಗ ಕಡಿಮೆ ಇದ್ದರೂ ಬಹುಮತ ಗಳಿಸುವ ವಿಶ್ವಾಸವಿದೆ ಎಂದು ಬಂಗಾರಪ್ಪ ಇದೇ ಸಂದರ್ಭದಲ್ಲಿ ನುಡಿದರು.
|