ರಾಜ್ಯಾದ್ಯಂತ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗಿದ್ದು, ಜನತೆಗೆ ವಿದ್ಯುತ್ ಕೊರತೆಯ ಬಿಸಿ ಮುಟ್ಟಿದೆ.
ನಾಗಝರಿ ಜಲ ವಿದ್ಯುತ್ ಕೇಂದ್ರದ ಮೂರು ಘಟಕ, ರಾಯಚೂರಿನಲ್ಲಿನ ಒಂದು ಘಟಕ ಹಾಗೆಯೇ, ತಾಲ್ಷೇರ್ ಮಾರ್ಗದಲ್ಲಿ ವಿದ್ಯುತ್ ಬರದಿರುವುದರಿಂದ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗಿದೆ ಎಂದು ವಿತರಣ ಕಂಪೆನಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯವು 100 ಮೆಗಾವ್ಯಾಟ್ ವಿದ್ಯುತ್ ಕೊರತೆ ಅನುಭವಿಸುತ್ತಿದ್ದು, ಶುಕ್ರವಾರ ಸಂಜೆಯಿಂದ ನಾಗಝರಿಯಲ್ಲಿನ ಆರು ಘಟಕಗಳು ಸೇರಿದಂತೆ ನಾನಾ ವಿದ್ಯುತ್ ಕೇಂದ್ರದಲ್ಲಿನ ವಿದ್ಯುತ್ ಘಟಕಗಳು ಸ್ಥಗಿತಗೊಂಡಿದ್ದವು. ಇದರ ಪರಿಣಾಮವಾಗಿ ವಿದ್ಯುತ್ ಪ್ರಮಾಣ ಕುಸಿದಿರುವ ಹಿನ್ನೆಲೆಯಲ್ಲಿ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರತಿದಿನದ ಬಳಕೆ 125 ದಶಲಕ್ಷ ಯೂನಿಟ್ ದಾಟಿದ್ದು, ವಿದ್ಯುತ್ ಬೇಡಿಕೆ ತೀವ್ರಗೊಂಡಿದೆ. ಅಲ್ಲದೆ, ರಾಯಚೂರಿನಲ್ಲಿನ 6ನೇ ಘಟಕವು ಕೆಲಸ ನಿರ್ವಹಿಸುತ್ತಿಲ್ಲವಾದ್ದರಿಂದ 210 ಮೆಗಾವ್ಯಾಟ್ ಕೊರತೆ ಕಂಡು ಬಂದಿದೆ.
ನಗರದಲ್ಲಿನ ಎಚ್ಎಎಲ್ ಬಳಿ ಇರುವ 66 ಕೆವಿ ವಿದ್ಯುತ್ ಮಾರ್ಗವನ್ನು 220ಕ್ಕೆ ಏರಿಸಲಿರುವ ಹಿನ್ನೆಲೆಯಲ್ಲಿ 20 ದಿನಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿವೆ ಎಂದು ತಿಳಿದು ಬಂದಿದೆ.
|