ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಹಾಗೂ ರೈಲ್ವೆ ಇಲಾಖೆ ಉದ್ಯೋಗದಲ್ಲಿ ಕನ್ನಡಿಗರನ್ನು ನಿರ್ಲಕ್ಷಿಸುತ್ತಿರುವುದನ್ನು ವಿರೋಧಿಸಿ ರಕ್ಷಣಾ ವೇದಿಕೆ ಕಾರ್ಯಕರ್ತರು ಸೇರಿದಂತೆ ಅನೇಕ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದವು.
ಮೈಸೂರು ಬ್ಯಾಂಕ್ ವೃತ್ತದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ರೈಲ್ವೆ ನಿಲ್ದಾಣದವರೆಗೆ ನಡೆದು ಪ್ರತಿಭಟನೆ ಮಾಡಿದರು. ಬಳಿಕ ರೈಲು ತಡೆ ನಡೆಸಿದರು. ರಾಜ್ಯದಲ್ಲಿ ಕನ್ನಡಿಗರಿಗೆ ಆದ್ಯತೆ, ನಂಜುಂಡಪ್ಪ ವರದಿ ಅನುಷ್ಠಾನ, ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಆದ್ಯತೆ ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿ ಕನ್ನಡ ಸಂಘಗಳು ಪ್ರತಿಭಟನೆ ನಡೆಸುತ್ತಿವೆ.
ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಕರ್ನಾಟಕದ ಜನತೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಕನ್ನಡದ ಜನತೆಯ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸದಿದ್ದರೆ ಉಗ್ರ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.
ರಾಜ್ಯವ್ಯಾಪಿಯಾಗಿ ನಡೆಸುತ್ತಿರುವ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಾಮರಾಜನಗರ, ನೆಲಮಂಗಲ ಹಾಗೂ ಬೆಳಗಾವಿಯಲ್ಲಿ ಕಾರ್ಯಕರ್ತರು ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ರೈಲು ತಡೆ ನಡೆಸಿದರು. ಚನ್ನಪಟ್ಟಣದಲ್ಲಿ ಕರುನಾಡ ಸೇನೆಯಿಂದ ರೈಲು ತಡೆ ನಡೆಸಿದರೆ, ಆನೇಕಲ್‌ನಲ್ಲಿ ಕೇಂದ್ರ ಸಚಿವ ಲಾಲೂ ಪ್ರಸಾದ್ ವಿರುದ್ಧ ಘೋಷಣೆ ಕೂಗಿ ಕಾರ್ಯಕರ್ತರು ಲಾಲೂ ಪ್ರತಿಕೃತಿ ದಹನ ಮಾಡಿದರು.
|