ಚುನಾವಣೆ ನಡೆಯಲಿದೆ ಎಂದಾದ ತಕ್ಷಣವೇ ಆರಂಭವಾಗಿದ್ದ ಪಕ್ಷ ಬದಲಿಸುವ ಪ್ರಕ್ರಿಯೆ ಮುಂದುವರಿದಿದ್ದು, ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು ಅಧಿಕೃತವಾಗಿ ಕಾಂಗ್ರೆಸ್ ಸೇರಿಕೊಂಡರು.
ರಾಜ್ಯ ಕಾಂಗ್ರೆಸ್ ಪಕ್ಷಗಳ ಉಸ್ತುವಾರಿ ವಹಿಸಿಕೊಳ್ಳುತ್ತಿರುವ ಪೃಥ್ವಿರಾಜ್ ಚೌಹಾಣ್ ಸಮ್ಮುಖದಲ್ಲಿ ಡಾ.ಎಚ್.ಸಿ. ಮಹದೇವಪ್ಪ, ವೈಜನಾಥ ಪಾಟೀಲ, ಎಚ್.ವೈ. ಮೇಟಿ, ಕೆ. ವೆಂಕಟೇಶ್, ಬಿ.ಆರ್. ಪಾಟೀಲ್ ಸೇರಿದಂತೆ ಎಂಟು ಜೆಡಿಎಸ್ ಮಾಜಿ ಶಾಸಕರು ಕಾಂಗ್ರೆಸ್ ಪಕ್ಷವನ್ನು ಸೇರಿದರು.
ಈ ಸಂದರ್ಭದಲ್ಲಿ ಪೃಥ್ವಿರಾಜ್ ಚೌಹಾಣ್ ಅವರು ರಾಜ್ಯ ರಾಜಕೀಯದ ಬಗ್ಗೆ ರಾಜ್ಯದ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದು, ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ. ಕೃಷ್ಣ ರಾಜಕಾರಣಕ್ಕೆ ಮರಳುವ ಕುರಿತು ಹಾಗೂ ಚುನಾವಣಾ ಪೂರ್ವ ತಯಾರಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಮಧ್ಯೆ, ಜೆಡಿಎಸ್ ತೊರೆದಿರುವ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೆ ನೀಡಿತ್ತು. ಆದರೆ ಪ್ರಕಾಶ್ ಹಾಗೂ ಸಂಗಡಿಗರಿಗೆ ಟಿಕೆಟ್ ನೀಡುವ ಕುರಿತು ಇನ್ನೂ ಪೂರ್ತಿಯಾಗಿ ಮಾತುಕತೆ ನಡೆಸದೇ ಇರುವುದರಿಂದ ಪಕ್ಷ ಸೇರುವುದು ವಿಳಂಬವಾಗಲಿದೆ ಎಂದು ತಿಳಿದು ಬಂದಿದೆ.
|