ನಿರಂತರವಾಗಿ 40 ಗಂಟೆಗಳ ಕಾಲ ಕೊಂಕಣಿಯಲ್ಲಿ ಸಮೂಹ ಗಾಯನ ಕಾರ್ಯಕ್ರಮವು ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಂಡಿದೆ.
'ಕೊಂಕಣಿ ನಿರಂತರಿ' ಕಾರ್ಯಕ್ರಮ ಶಕ್ತಿನಗರದಲ್ಲಿರುವ ಕಲಾಂಗಣ್ ಆಂಫಿಥಿಯೇಟರಿನಲ್ಲಿ ಸತತವಾಗಿ 40 ಗಂಟೆಗಳ ಕಾಲ ಸುಮಾರು 1700 ಗಾಯಕರು ಹಾಡುವ ಮೂಲಕ ಈ ಹಿಂದೆ ಬ್ರೆಜಿಲ್‌ನಲ್ಲಿ 36 ಗಂಟೆಗಳ ಗಿನ್ನಿಸ್ ದಾಖಲೆಯನ್ನು ಮುರಿಯಲಾಗಿದೆ.
ಗಣರಾಜೋತ್ಸವದ ದಿನದಂದು ಬೆಳಿಗ್ಗೆ 6 ಗಂಟೆಗೆ ದಾಖಲೆಗೆ ಚಾಲನೆ ನೀಡಿದ್ದು, ಭಾನುವಾರ ರಾತ್ರಿ 10 ಗಂಟೆಗೆ ಮುಗಿಯುತ್ತಿದ್ದಂತೆ ಸೇರಿದ್ದ ಜನಸ್ತೋಮ ಕರತಾಡನದೊಂದಿಗೆ ಅಭಿನಂದಿಸಿದರು. ಗಿನ್ನಿಸ್ ದಾಖಲೆ ಪರೀವೀಕ್ಷಕ ಕೀತ್ ಪುಲೀನ್ ಖುದ್ದಾಗಿ ಹಾಜರಿದ್ದು, ಗಾಯನವನ್ನು ವೀಕ್ಷಿಸಿದರು. ಗಾಯನದ ಪ್ರತಿಯೊಂದು ಕ್ಷಣವನ್ನು ವೀಡಿಯೋ ಮೂಲಕ ದಾಖಲಿಸಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಸಮಾರೋಪ ಸಮಾರಂಭದಲ್ಲಿ ಕೀತ್ ಪುಲೀನ್ ಗಿನ್ನಿಸ್ ದಾಖಲೆಯ ಪ್ರಮಾಣ ಪತ್ರವನ್ನು ಮಾಂಡ್ ಸೋಭಾಣ್ ಅಧ್ಯಕ್ಷ ಲೂಯಿಸ್ ಪಿಂಟೊ ಹಾಗೂ ಮುಖ್ಯಸ್ಥ ಎರಿಕ್ ಒಝಾರಿಯೊ ಅವರಿಗೆ ಹಸ್ತಾಂತರಿಸಿದರು.
ಇದರಲ್ಲಿ ಒಂದರ ನಂತರ ಮತ್ತೊಂದರಂತೆ ಒಟ್ಟು 44 ಪಂಗಡಗಳಾಗಿ ವಿಭಾಗಿಸಿ, ಒಟ್ಟು 640 ಹಾಡುಗಳಿಗೆ ಧ್ವನಿ ಗೂಡಿಸಿದ್ದಾರೆ. ಒಂದು ಸಲ ಗಾಯನವಾದ ಬಳಿಕ ಮತ್ತೆ ಅವರು ವೇದಿಕೆ ಹತ್ತುವಂತಿಲ್ಲ. ಇದರಿಂದಾಗಿ ಈ ಸಮೂಹ ಗಾಯನಕ್ಕಾಗಿ ಮುಂಬಯಿ, ಗೋವಾ ಸೇರಿದಂತೆ ದೇಶದ ಹಾಗೂ ವಿದೇಶದ ನಾನಾ ಭಾಗಗಳಿಂದ ಕಲಾವಿದರು ಆಗಮಿಸಿದ್ದರು.
|