ವಿಶೇಷ ವರದಿ ಜಿಲ್ಲೆಯ ಹೊನ್ನಾಳಿಯಲ್ಲಿ ಬಂಧಿತರಾಗಿರುವ ಇಬ್ಬರು ಉಗ್ರರು ಹೈದರಾಬಾದ್ ಸ್ಫೋಟ ಪ್ರಕರಣದಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದರು ಎಂಬ ಮಹತ್ವದ ಅಂಶ ಬಳಕಿಗೆ ಬಂದ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರು ಜಿಲ್ಲೆಗೆ ಆಗಮಿಸಿದ್ದಾರೆ.
ಶಂಕಿತ ಉಗ್ರರಾದ ಮಹಮದ್ ಗೌಸ್ ಅಲಿಯಾಸ್ ರಿಯಾಜುದ್ದೀನ್ ನಾಸಿರ್ ಮತ್ತು ಆತನ ಸಹಚರ ಅಸಾಮುಲ್ಲಾ ಇಸ್ಮಾಯಿಲ್ ಅಬೂಬಕರ್‌ನನ್ನು ಬೈಕ್ ಕಳವು ಆರೋಪದ ಮೇಲೆ ದಾವಣಗೆರೆ ಪೊಲೀಸರು ಬಂಧಿಸಿದ್ದರು. ಮಹಮದ್ ಗೌಸ್ ಹೈದರಾಬಾದ್ ಎಸ್ಟಿಎಫ್ ಕಚೇರಿಯ ಸ್ಫೋಟ ಪ್ರಕರಣದ ರೂವಾರಿ ಶಾಹೀದ್ ಜೊತೆ ಸಂಪರ್ಕದಲ್ಲಿದ್ದ ಎಂಬ ಅಂಶ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಹೈದಾಬಾದ್ ಪೊಲೀಸರ ಭೇಟಿಗೆ ಮಹತ್ವ ಬಂದಿದೆ.
ಉಗ್ರರ ಬಗ್ಗೆ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಮುಂಬೈ, ದಿಲ್ಲಿ ಪೊಲೀಸರು ಈಗಾಗಲೇ ಜಿಲ್ಲೆಗೆ ಆಗಮಿಸಿದ್ದು, ಉಗ್ರರಿಂದ ಮಹತ್ವದ ಸುಳಿವು ಸಿಗುವ ಸಾಧ್ಯತೆಗಳಿವೆ. ಉಗ್ರರು ಹುಬ್ಬಳ್ಳಿ ವಿಮಾನ ನಿಲ್ದಾಣ ಸ್ಫೋಟಕ್ಕೆ ಸಂಚು ಮಾಡಿದ್ದರು ಎಂಬ ಮಹತ್ವದ ಸುಳಿವು ಪೊಲೀಸರು ನಡೆಸಿದ ವಿಚಾರಣೆ ವೇಳೆ ಹೊರಬಂದಿತ್ತು.
ಈ ಮಧ್ಯೆ, ಬಂಧಿತ ಉಗ್ರರ ಭಾವಚಿತ್ರವನ್ನು ದೇಶದ ಎಲ್ಲಾ ಪೊಲೀಸ್ ಠಾಣೆಗಳಿಗೂ ರವಾನಿಸಲಾಗಿದೆ. ಅಲ್ಲದೆ, ಈಗಾಗಲೇ ಉಗ್ರರ ವಿಚಾರಣೆಯನ್ನು ನಡೆಸಲು ಭಯೋತ್ಪಾದಕ ನಿಗ್ರಹ ದಳ ಆಗಮಿಸಿದ್ದು, ಉಗ್ರರು ಯಾವ ಭಯೋತ್ಪಾದಕ ಗುಂಪಿಗೆ ಸೇರಿದ್ದಾರೆ ಎಂಬುದನ್ನು ಅರಿಯುವ ನಿಟ್ಟಿನಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದರೆ ರಾಜ್ಯವು ಇತ್ತೀಚೆಗೆ ಉಗ್ರರ ತಾಣವಾಗಿರುವುದು ಸ್ಪಷ್ಟವಾಗುತ್ತಿದೆ. ಮುಖ್ಯವಾಗಿ ಉಗ್ರರಿಗೆ ರಾಜ್ಯವು ಸುರಕ್ಷಿತ ತಾಣವಾಗಿ ಕಂಡು ಬಂದಿರುವುದು ಇದಕ್ಕೆ ಕಾರಣ. ಇತ್ತೀಚೆಗಷ್ಟೇ ಎಲ್ಟಿಟಿಇ ಉಗ್ರರನ್ನು ಸೆರೆಹಿಡಿದ ಬೆನ್ನಲ್ಲೆ ಈಗ ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದಕರು ಸೆರೆಯಾಗಿರುವುದು ಜನತೆಯಲ್ಲಿ ಆತಂಕ ಸೃಷ್ಟಿಸಿದೆ.
|