ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಳ್ಳಿ ಹಕ್ಕಿಯ ಹಾಡಿನಲ್ಲಿ ಕೃಷ್ಣ-ಸರೋಜಾದೇವಿ ಸಂಬಂಧ
ವಿಶೇಷ ವರದಿ: ನ್ಯೂಸ್ ರೂಮ್
ಮಾಜಿ ಸಚಿವ ಎಚ್. ವಿಶ್ವನಾಥ್ ಬರೆದಿರುವ ಆತ್ಮಕಥನ 'ಹಳ್ಳಿ ಹಕ್ಕಿ ಹಾಡು' ಇದೀಗ ರಾಜ್ಯ ರಾಜಕಾರಣದಲ್ಲಿ ಹಲವು ವಿವಾದಕ್ಕೆ ನಾಂದಿ ಹಾಡಲಿದೆ. ಸೋಮವಾರ ಸಂಜೆ ಮೈಸೂರಿನಲ್ಲಿ ಬಿಡುಗಡೆಗೊಳ್ಳಲಿರುವ ಈ ಕೃತಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ನಟಿ ಸರೋಜದೇವಿ ನಡುವೆ ಮಧುರ ಸಂಬಂಧವಿತ್ತು ಎಂಬ ಅಂಶ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

'ಹಳ್ಳಿ ಹಕ್ಕಿಯ ಹಾಡು' ಕೃತಿಯಲ್ಲಿ ಉಲ್ಲೇಖಿಸಿದ ಈ ಅಂಶ ಎಸ್. ಎಂ.ಕೃಷ್ಣ ಅವರ ವರ್ಚಸ್ಸಿಗೆ ಧಕ್ಕೆಯಾದೀತು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದು, ಕೃಷ್ಣರವರು ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುತ್ತಿರುವ ಸಂದರ್ಭದಲ್ಲೇ ಈ ಅಂಶ ಬಯಲಿಗೆ ಬಂದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಈ ಬಗ್ಗೆ ಕೃತಿಕಾರ ವಿಶ್ವನಾಥ್ ಹೇಳುವಂತೆ, ನಾನು ಅವರಿಬ್ಬರ ನಡುವೆ ಮಧುರ ಬಾಂಧವ್ಯವಿತ್ತು ಎಂದಷ್ಟೇ ಉಲ್ಲೇಖಿಸಿದ್ದೇನೆ. ಇದನ್ನೇ ವಿವಾದವನ್ನಾಗಿ ಮಾಡಬೇಕಿಲ್ಲ ಎಂದು ನಮ್ಮ ಪ್ರತಿನಿಧಿಯೊಂದಿಗೆ ದೂರವಾಣಿಯಲ್ಲಿ ತಿಳಿಸಿದ್ದಾರೆ.

ಸ್ವತಃ ಕೃಷ್ಣರವರೇ ತಮ್ಮೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಲೋಕಾಭಿರಾಮವಾಗಿ ಹರಟುತ್ತಿದ್ದಾಗ ಇದನ್ನು ಉಲ್ಲೇಖಿಸಿದ್ದರು ಎಂಬ ಅಂಶವನ್ನು ಕೃತಿಯಲ್ಲಿ ಬರೆದಿದ್ದಾರೆ ಎನ್ನಲಾಗಿದೆ. ಆದರೆ ನಟಿ ಸರೋಜಾದೇವಿ 'ಈ ಬಗ್ಗೆ ನಾನೇನು ಈಗ ಹೇಳಲಾರೆ' ಎಂದು ಖಾಸಗಿ ವಾಹಿನಿಯೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಒಟ್ಟಾರೆಯಾಗಿ ಈ ವಿವಾದ ಎಸ್.ಎಂ.ಕೃಷ್ಣರವರ ವರ್ಚಸ್ಸಿನ ಮೇಲೆ ಪರಿಣಾಮ ಬೀರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಮತ್ತಷ್ಟು
ಹೈದ್ರಾಬಾದ್ ಸ್ಫೋಟದಲ್ಲಿ ದಾವಣಗೆರೆ ಉಗ್ರರ ಕೈ
ಉಡುಪಿ: ಅಷ್ಟಮಠಾಧೀಶರ ಮಹತ್ವದ ಸಭೆ ಇಂದು
ಕಲುಷಿತ ನೀರು: ಮಹಿಳೆ ಸಾವು, ಹಲವರು ಆಸ್ಪತ್ರೆಗೆ
ಗಿನ್ನಿಸ್ ದಾಖಲೆ ಸೇರಿದ 40 ಗಂಟೆ ಕೊಂಕಣಿ ಗಾಯನ
8 ಶಾಸಕರು ಕಾಂಗ್ರೆಸಿಗೆ; ಪ್ರಕಾಶ್ ಮತ್ತಷ್ಟು ವಿಳಂಬ
ಕನ್ನಡಕ್ಕಾಗಿ, ಕನ್ನಡಿಗರಿಗಾಗಿ ರಾಜ್ಯಾದ್ಯಂತ ರೈಲು ತಡೆ