ಎಸ್.ಎಂ.ಕೃಷ್ಣರ ವೈಯಕ್ತಿಕ ಬದುಕಿನ ಸಾಲುಗಳನ್ನು ನಮೂದಿಸಿದ್ದಕ್ಕಾಗಿ ತೀವ್ರ ವಿವಾದ ಮತ್ತು ಗಲಾಟೆಗೆ ಕಾರಣವಾಗಿದ್ದ ಹಳ್ಳಿ ಹಕ್ಕಿಯ ಹಾಡು ಪುಸ್ತಕ ಕೊನೆಗೂ ಬಿಡುಗಡೆಯ ಭಾಗ್ಯ ಕಂಡಿದೆ.
ನಿನ್ನೆ ನಿಗದಿಯಾಗಿದ್ದ ಬಿಡುಗಡೆ ಸಮಾರಂಭಕ್ಕೆ ಮುಂಚಿತವಾಗಿ ಗಲಾಟೆಗಳಾಗಿದ್ದರಿಂದ ಕೃತಿ ಬಿಡುಗಡೆಯಾಗಿರಲಿಲ್ಲ. ಸಾಹಿತಿ ಅನಂತಮೂರ್ತಿಯವರು ಕೇವಲ ಪ್ರಾಸ್ತಾವಿಕವಾಗಿ ಮಾತುಗಳನ್ನಾಡುವುದರ ಮೂಲಕ ಸಮಾರಂಭ ಮುಗಿದಿತ್ತು. ಆದರೆ ಇಂದು ಮೈಸೂರಿನ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯ ಸಮಯದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಸಮಾರಂಭದಲ್ಲಿ ಹಾಜರಿದ್ದು ಪುಸ್ತಕವನ್ನು ಬಿಡುಗಡೆ ಮಾಡಿದ ವಿಚಾರವಾದಿ ಮತ್ತು ಚಿಂತಕ ಗೋವಿಂದಯ್ಯನವರು ಮಾತನಾಡುತ್ತಾ, ಕೃತಿಯ ಹೂರಣ ಮುಂಚಿತವಾಗಿಯೇ ಬಹಿರಂಗಗೊಳ್ಳಬಾರದಿತ್ತು, ಗುಟ್ಟು ಕಾಯ್ದುಕೊಳ್ಳಬೇಕಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಎಚ್.ವಿಶ್ವನಾಥ್, ಮೊದಲು ಎಲ್ಲರೂ ಪುಸ್ತಕವನ್ನು ಓದಲಿ. ಒಂದು ವೇಳೆ ಆಕ್ಷೇಪಣಕಾರಿಯಾದ ವಿಚಾರಗಳೇನಾದರೂ ಇದ್ದಲ್ಲಿ ಚರ್ಚೆ ಮಾಡೋಣ ಎಂದು ನುಡಿದರು. ನಿನ್ನೆ ನಡೆದ ಕಹಿ ಘಟನೆಗಳ ಹಿನ್ನೆಲೆಯಲ್ಲಿ ಪತ್ರಕರ್ತರ ಭವನಕ್ಕೆ ಪೊಲೀಸ್ ಇಲಾಖೆ ವತಿಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
|