ಇತ್ತೀಚೆಗೆ ಕಳ್ಳತನ ಸುಲಿಗೆ ಪ್ರಕರಣಗಳು ಹೆಚ್ಚಿಗೆಯಾಗುತ್ತಿವೆ. ನಾನಾ ರೀತಿಯಲ್ಲಿ ಜನರನ್ನು ವಂಚಿಸಿ ನಗ-ನಾಣ್ಯ ಲೂಟಿ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ರೋಗಿಗಳಿಗೆ ಸ್ಕ್ಯಾನಿಂಗ್ ಮಾಡುವ ನೆಪದಲ್ಲಿ ಚಿನ್ನಾಭರಣವನ್ನು ಲೂಟಿ ಮಾಡುತ್ತಿದ್ದ ಸಲೀಂ ಎಂಬಾತನನ್ನು ಚಿಕ್ಕಪೇಟೆ ಪೊಲೀಸರು ಈಗಾಗಲೇ ಬಂಧಿಸಿದ್ದು, ಇದು ಜನರನ್ನು ವಂಚಿಸಲು ಕಳ್ಳರು ಏನೆಲ್ಲಾ ವೇಷ ತೊಡುತ್ತಾರೆ, ಯಾವುದೆಲ್ಲಾ ಮಾರ್ಗಗಳನ್ನು ಅನುಸರಿಸುತ್ತಾರೆ ಎಂಬುದರ ಕುರಿತು ಸಾರ್ವಜನಿಕರಿಗೆ ನೀಡಿರುವ ಎಚ್ಚರಿಕೆಯ ಗಂಟೆಯಾಗಿದೆ.
ಡಾಕ್ಟರ್ ವೇಷಧಾರಿಯಾಗಿ ಬರುತ್ತಿದ್ದ ಈತ, ಆಸ್ಪತ್ರೆಗಳಿಗೆ ಬರುವ ಮಹಿಳಾ ರೋಗಿಗಳಿಗೆ ಸ್ಕ್ಯಾನಿಂಗ್ ಮಾಡುವ ಮೊದಲು ಚಿನ್ನಾಭರಣಗಳನ್ನು ತೆಗೆದಿಡುವಂತೆ ಹೇಳಿ ಅದನ್ನು ಪಡೆದುಕೊಂಡು ಬಳಿಕ ಪರಾರಿಯಾಗುತ್ತಿದ್ದ.
ವಿಕ್ಟೋರಿಯಾ, ಕಿದ್ವಾಯಿ ಸೇರಿದಂತೆ ಹಲವು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ವೈದ್ಯರ ಸೋಗಿನಲ್ಲಿ ಆಸ್ಪತ್ರೆಗಳ ಆಡಳಿತಾಧಿಕಾರಿಗಳಿಗೂ ಅನುಮಾನ ಬಾರದ ರೀತಿಯಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ಸಲೀಂ ಹೀಗೆ ಸ್ಕ್ಯಾನಿಂಗ್ ಮಾಡುವ ವೇಳೆ ಲೂಟಿ ಮಾಡಿದ ಸುಮಾರು 6 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ಈಗಾಗಲೇ ವಶಪಡಿಸಿಕೊಂಡಿದ್ದಾರೆ.
ಈವರೆಗೆ ಸಾರ್ವಜನಿಕರಿಗೆ ಮಾಡಿರುವ ವಂಚನೆಯಲ್ಲಿ ಒಟ್ಟು 9 ಪ್ರಕರಣಗಳು ಈತನ ವಿರುದ್ಧ ದಾಖಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
|