ಆಟೋ ದರದಲ್ಲಿ ಸ್ವಲ್ಪ ಮಟ್ಟಿನ ಏರಿಕೆಯಾಗುವ ಸಾದ್ಯತೆ ದಟ್ಟವಾಗಿದ್ದು, ಇದರನ್ವಯ ಕನಿಷ್ಠ ದರ 12ರೂ.ಗಳಿಂದ 13 ಅಥವಾ 14 ರೂ.ಗಳಾಗಲಿದೆ ಮತ್ತು ಪ್ರತಿ ಕಿ.ಮೀ.ಗೆ. ಪ್ರಸ್ತುತವಿರುವ 6ರೂ. ದರ 7ರೂ. ಆಗಲಿದೆ ಎಂದು ತಿಳಿದು ಬಂದಿದೆ.
ಆಟೋದರವನ್ನು ಹೆಚ್ಚಿಸುವ ಕುರಿತಾಗಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘಟನೆಗಳು ಈಗಾಗಲೇ ಜಿಲ್ಲಾಧಿಕಾರಿ ಎಂ.ಎ. ಸಾಧಿಕ್ ನೇತೃತ್ವದಲ್ಲಿನ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದು, ಬುಧವಾರ ನಡೆಯುವ ಅಂತಿಮ ಸಭೆಯಲ್ಲಿ ನಿರ್ಧಾರ ಹೊರಬೀಳುವ ಸಾಧ್ಯತೆಗಳಿವೆ.
ಪ್ರಸ್ತುತ ಎಲ್ಪಿಜಿ ದರ ಸೇರಿದಂತೆ ಹಲವು ಆಟೋ ಉತ್ಪನ್ನಗಳ ದರದಲ್ಲಿ ಹೆಚ್ಚಳವಾಗಿರುವುದರಿಂದ ಆಟೋದರವನ್ನು ಹೆಚ್ಚಿಸುವುದು ಅನಿವಾರ್ಯ. ಆಟೋ ಮಾಲೀಕರ ಈ ಬೇಡಿಕೆ ಒಪ್ಪುವಂಥದ್ದೇ. ಈ ಬಗ್ಗೆ ಪರೀಶೀಲಿಸಿ ಆಟೋ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅನ್ಯಾಯವಾಗದ ರೀತಿಯಲ್ಲಿ ದರ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಈ ಮಧ್ಯೆ ಆಟೋ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯವೆದ್ದಿರುವುದು ಕಂಡುಬಂದಿದ್ದು, ದರ ಪರಿಷ್ಕರಣೆ ಸಂಬಂಧ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಆಟೋರಿಕ್ಷಾ ಡ್ರೈವರ್ ಯೂನಿಯನ್ ಬುಧವಾರ ರಾಜಭವನ ಚಲೋ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದು, ಗುರುವಾರದಂದು ಧರಣಿ ನಡೆಸುವುದಾಗಿ ತಿಳಿಸಿದೆ.
|