ಜಲಮಂಡಳಿಯ ನೀರಿನ ಪೈಪ್ ಉಂಟುಮಾಡಿದ ಸಮಸ್ಯೆಯಿಂದಾಗಿ ಅಂಬೆಗಾಲಿಡುತ್ತಿದ್ದ ಕಾವೇರಿ ಜಂಕ್ಷನ್ ಬಳಿಯ ಅಂಡರ್‌ಪಾಸ್ ನಿರ್ಮಾಣದ ಶೇಕಡ 75ರಷ್ಟು ಭಾಗ ಮುಗಿದಿದ್ದು ಫೆಬ್ರವರಿ 2 ಅಥವಾ 3ರಂದು ಅದು ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ.
ಕೇವಲ 72 ಗಂಟೆಗಳಲ್ಲಿ ಮುಗಿಯಲಿರುವ ಕಾಮಗಾರಿ ಎಂದೇ ಹೆಸರು ಪಡೆದಿದ್ದ ಸುಮಾರು 1.5 ಕೋಟಿ ವೆಚ್ಚದ ಈ ಅಂಡರ್‌ಪಾಸ್ ನಿರ್ಮಾಣಕ್ಕೆ ಬ್ರಿಟಿಷರ ಕಾಲದ ನೀರಿನ ಕೊಳವೆ ಹಾಗೂ ಅನೀರೀಕ್ಷಿತವಾಗಿ ಕಂಡುಬಂದ ಅಂತರ್ಜಲಗಳೆರಡೂ ಸಮಸ್ಯೆಯಾಗಿ ಕಾಡಿದ್ದವು. ಜತೆಗೆ ಒಮ್ಮೆ ಮಣ್ಣು ಕುಸಿತವೂ ಕಂಡುಬಂದು ಕಾಮಗಾರಿಯ ಪ್ರಗತಿಗೆ ತಡೆಯೊಡ್ಡಿತ್ತು.
ಸುರಂಗ ಮಾರ್ಗದೊಳಗೆ ತೆರಳುವ ರಸ್ತೆಗಳ ತಡೆಗೋಡೆ ಕಾಮಗಾರಿ ಈಗ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿದ್ದು, ನಿರ್ಮಾಣ ಸಂದರ್ಭದಲ್ಲಿ ನೀರಿನ ಕೊಳವೆಯಿಂದ ಸೋರಿದ್ದ ನೀರು ಸಂಪೂರ್ಣ ನಿವಾರಣೆಯಾಗಿದೆ ಎಂದು ತಿಳಿದುಬಂದಿದೆ.
ಕಾವೇರಿ ಜಂಕ್ಷನ್ ಬಳಿಯ ಈ ಅಂಡರ್ಪಾಸ್ ಸಾರ್ವಜನಿಕ ಸೇವೆಗೆ ಮುಕ್ತವಾದ ನಂತರ ಬಿಡಿಎ ಜಂಕ್ಷನ್ ಬಳಿ ಮತ್ತೊಂದು ಕಾಮಗಾರಿ ಅರಂಭವಾಗಲಿದ್ದು ಇದು ಒಂದು ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.
|