40 ಅಡಿ ಆಳದ ತೆರೆದ ಕೊಳವೆ ಬಾವಿಯಲ್ಲಿ ಬಿದ್ದಿದ್ದ 6 ವರ್ಷದ ಬಾಲಕ ನವನಾಥ್‌ನನ್ನು ರಕ್ಷಿಸಲಾಗಿದ್ದು, ಕೊಳವೆ ಬಾವಿಯಿಂದ ಹೊರಬಂದ ಬಾಲಕ ನಗು ಚೆಲ್ಲುತ್ತಾ, ಆತಂಕ ತುಂಬಿದ ಮುಖಗಳಲ್ಲಿ ಹರ್ಷ ಮೂಡಿಸಿದ.
ಅಳಂದ ತಾಲೂಕಿನ ಭೂಸನೂರು ಬಳಿ ಕೊಳವೆ ಬಾವಿಯೊಳಗೆ ಬಿದ್ದಿದ್ದ ಬಾಲಕನನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರು ಮಂಗಳವಾರ ತಡರಾತ್ರಿಯವರೆಗೆ ಸತತ 8ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದರು. ಸುರಕ್ಷಿತವಾಗಿ ಬಾಲಕನನ್ನು ಹೊರತೆಗೆಯಲಾಯಿತು.
ಬೆಳಿಗ್ಗೆ 10ರ ಸುಮಾರಿಗೆ ತನ್ನ ಪೋಷಕರನ್ನು ನೋಡಲು ತೆರಳಿದ್ದ ನವನಾಥ್ ಆಕಸ್ಮಿಕವಾಗಿ ಕೊಳವೆ ಬಾವಿಯಲ್ಲಿ ಬಿದ್ದು ಬಿಟ್ಟ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಕಾರ್ಯಾಚರಣೆ ತಂಡ ಬಾಲಕನನ್ನು ರಕ್ಷಿಸುವ ಕಾರ್ಯವನ್ನು ಪ್ರಾರಂಭಿಸಿತು. ಸ್ಥಳಕ್ಕೆ ತಹಸೀಲ್ದಾರರು ಭೇಟಿ ನೀಡಿ, ರಕ್ಷಣಾ ಕಾರ್ಯವನ್ನು ಪರೀಶೀಲಿಸಿದರು. ಆತನಿಗೆ ಪೈಪಿನ ಮೂಲಕ ಹಾಲು, ಬಿಸ್ಕತ್ ನೀಡಲಾಯಿತು. ಅಲ್ಲದೆ, ಅಧಿಕಾರಿಗಳು ಆತನಲ್ಲಿ ಧೃತಿಗೆಡದಂತೆ ಧೈರ್ಯ ತುಂಬುತ್ತಿದ್ದರು. ವೈದ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಬಾಲಕನಿಗೆ ಬೇಕಾದ ಪ್ರಥಮ ಚಿಕಿತ್ಸೆಯ ವ್ಯವಸ್ಥೆಯನ್ನು ನೀಡಿದರು. ಬಳಿಕ ಕೊಳವೆಯೊಳಗೆ ಚಿಕ್ಕ ಸೌಂಡ್ ಬಾಕ್ಸ್ ಇಟ್ಟು, ಹಗ್ಗವನ್ನು ಇಳಿಸಿ, ಮೇಲಿನಿಂದ ಅಧಿಕಾರಿಗಳ ಸೂಚನೆಯ ಮೇರೆಗೆ ಹಗ್ಗ ಹಿಡಿದ ಬಾಲಕ ಸುರಕ್ಷಿತವಾಗಿ ಮೇಲೆ ಬಂದನು. ಬಾಲಕ ಮೇಲೆ ಬಂದ ಕೂಡಲೇ ಸಂತಸಗೊಂಡ ಗ್ರಾಮಸ್ಥರು ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಎಲ್ಲರೂ ಬಾಲಕನನ್ನು ಎತ್ತಿ ಮುದ್ದಾಡುತ್ತಿದ್ದರು.
ಬಳಿಕ ಮಾತನಾಡಿದ ಜಿಲ್ಲಾ ತಹಶೀಲ್ದಾರರು, ಬಾಲಕನ ವಿದ್ಯಾಭ್ಯಾಸದ ಹೊಣೆಯನ್ನು ಸರ್ಕಾರ ಭರಿಸುವುದಾಗಿ ತಿಳಿಸಿದರು. ಇನ್ನು ಮುಂದೆ ಈ ರೀತಿಯ ಅನಾಹುತಗಳು ಆಗದಂತೆ ತಡೆಯುವ ನಿಟ್ಟಿನಲ್ಲಿ ಸರ್ಕಾರವು ತೆರೆದ ಕೊಳವೆ ಬಾವಿಗಳನ್ನು ಮುಚ್ಚುವ ಕಾರ್ಯ ಆಗಬೇಕಿದೆ.
ಇದೇ ವೇಳೆ, ರಾಜ್ಯಪಾಲರ ಸಲಹೆಗಾರ ಪಿ.ಕೆ. ಹರ್ಮಿಸ್ ತರಕನ್, ರಾಜ್ಯದಲ್ಲಿರುವ ತೆರೆದ ಬಾವಿಗಳಿಂದ ಸಂಭವಿಸುತ್ತಿರುವ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಸರ್ಕಾರ ಕೈಗೊಳ್ಳುತ್ತದೆ ಎಂದು ಈ ಘಟನೆಯ ಬಳಿಕ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
|